ಸೋಮವಾರಪೇಟೆ,ಆ.18: ಕೊಡಗಿನ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಸೇರಿದಂತೆ ಅವಕಾಶ ಗಳಿಂದ ವಂಚಿತವಾಗಿರುವ ವಿದ್ಯಾವಂತರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ನೂತನವಾಗಿ ಕೊಡಗು ಪ್ರಜಾರಂಗ ಎಂಬ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ರಾಜಕೀಯ ಪಕ್ಷಗಳಲ್ಲಿ ಅನಕ್ಷರಸ್ಥರು, ಸಮಾಜದ ಹಿತ ಮರೆತವರು, ವಿಚಾರಹೀನರೇ ತುಂಬಿದ್ದು, ವಿದ್ಯಾವಂತ, ಬುದ್ಧಿವಂತ, ಸಾಮಾಜಿಕ ಕಾಳಜಿ ಇರುವವರಿಗೆ ಸ್ಥಾನ ಇಲ್ಲದಂತಾಗಿದೆ. ಹೋರಾಟ ಗಾರರನ್ನು ಜೈಲಿಗಟ್ಟುವ, ಅವರನ್ನು ನೈತಿಕವಾಗಿ ಕುಗ್ಗಿಸುವ ಹುನ್ನಾರಗಳೂ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಹೋರಾಟದ ಮನೋಭಾವ ತುಂಬಿರುವ ಕಾರ್ಯಕರ್ತರನ್ನು ಸಂಘಟಿಸುವ ಗುರಿಯೊಂದಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಹೋರಾಟಕ್ಕೆ ಸಂಘಟನೆ ರಚನೆಗೊಂಡಿದೆ ಎಂದರು.

ಜಿಲ್ಲೆಯನ್ನು ಕಾಡುತ್ತಿರುವ ಕಾಡಾನೆ ಹಾವಳಿ ಸಮಸ್ಯೆಗೆ ಶಾಶ್ವತ ಪರಿಹಾರ ಸೇರಿದಂತೆ, ಬಡ ರೈತರ ಒತ್ತುವರಿ ತೆರವುಗೊಳಿಸದೇ ಅವರಿಗೇ ಸಕ್ರಮಗೊಳಿಸಿಕೊಡಬೇಕು. ರಸ ಗೊಬ್ಬರಗಳ ಬೆಲೆಯನ್ನು ಇಳಿಸಬೇಕು. ಮಧ್ಯಮ ಹಾಗೂ ಸಣ್ಣ ಬೆಳೆಗಾರರ ವಾಹನ ಹಾಗೂ ಪಶು ಸಾಲವನ್ನು ಮನ್ನಾ ಮಾಡಬೇಕು. ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಅಳವಡಿಸಬೇಕು ಎಂದು ಸಂಘಟನೆ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದರು.

ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಬೇಕೆಂಬ ಕಾನೂನು ರಚನೆಯಾಗಬೇಕು. ಹೆಣ್ಣುಮಕ್ಕಳ ಭವಿಷ್ಯವನ್ನು ಚಿಂದಿ ಮಾಡುವ ಅತ್ಯಾಚಾರದಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅತ್ಯಾಚಾರ ಸಾಬೀತಾದರೆ ಈಗಿರುವ ಭಾರತೀಯ ದಂಡ ಸಂಹಿತೆ ಕಲಂ 376 ಕ್ಕೆ ತಿದ್ದುಪಡಿ ತಂದು, ಜೀವಾವಧಿ ಬದಲಿಗೆ ಮರಣ ದಂಡನೆ ವಿಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲು ಹೋರಾಟ ರೂಪಿಸಲಾಗುವದು ಎಂದರು.

ಸಮಾಜವನ್ನು ಕಾಡುತ್ತಿರುವ ಭ್ರಷ್ಟಾಚಾರ, ದೌರ್ಜನ್ಯ, ಸಾಮಾಜಿಕ ಅಸಮಾನತೆ, ಪಿಡುಗುಗಳ ವಿರುದ್ಧ ಸಂಘಟನೆ ಸದಾ ಹೋರಾಡಲಿದೆ. ಹೋರಾಟಗಾರರನ್ನು ವ್ಯವಸ್ಥಿತವಾಗಿ ಮಟ್ಟಹಾಕುವ ಹುನ್ನಾರವೂ ಜಿಲ್ಲೆಯಲ್ಲಿ ಕೆಲವರಿಂದ ನಡೆಯುತ್ತಿದ್ದು, ಇದಕ್ಕೆ ತಕ್ಕ ಉತ್ತರ ನೀಡಲು ಪ್ರಜಾ ರಂಗ ಸಿದ್ಧವಿದೆ. ರಾಜಕೀಯ ರಹಿತವಾಗಿ ಹೋರಾಟಗಳನ್ನು ನಡೆಸಲಾಗುವದು ಎಂದು ವಿಠಲ್ ಗೌಡ ಮಾಹಿತಿ ನೀಡಿದರು.

ಈಗಾಗಲೇ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿಗಳಿಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಉಳಿದಂತೆ ಪದಾಧಿಕಾರಿಗಳು ಹಾಗೂ ಗ್ರಾ.ಪಂ. ಮಟ್ಟದಲ್ಲಿ ಸಂಘಟನೆಯನ್ನು ರಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕೊಡಗು ಪ್ರಜಾ ರಂಗದ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ಆನಂದ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪೂವಯ್ಯ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪ್ರಕಾಶ್ ಚಂಗಪ್ಪ, ಶನಿವಾರಸಂತೆ ಹೋಬಳಿ ಅಧ್ಯಕ್ಷ ಕೆ.ಸಿ. ಪ್ರಕಾಶ್ ಅವರುಗಳು ಉಪಸ್ಥಿತರಿದ್ದರು.