ಮಡಿಕೇರಿ, ಅ. 19: ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ತಾ. 21 ರಂದು ಸಂಜೆ 6.30ಕ್ಕೆ ಅಸ್ಸಾಮಿನ ಬಿಹು ನೃತ್ಯ ನಡೆಯಲಿದೆ. ಸಾಂಪ್ರದಾಯಿಕವಾಗಿ ವಸಂತದ ಆಗಮನ ಕಾಲದಲ್ಲಿ ಅಥವಾ ರೊಂಗಾಲಿ ಬಿಹು ಉತ್ಸವದಲ್ಲಿ ಕಾಣಸಿಗುವ ಬಿಹು ನೃತ್ಯ ಅಸ್ಸಾಮಿನ, ರೈತಾಪಿ ಮಂದಿಯ ಗ್ರಾಮೀಣ ನೃತ್ಯ ಪ್ರಕಾರಗಳಲ್ಲೊಂದು. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಒಂದಾಗಿ ಸಾಂಪ್ರದಾಯಿಕ ನೂತನ ವರ್ಷವನ್ನು ಈ ನೃತ್ಯದ ಮೂಲಕ ಸ್ವಾಗತಿಸುವದು ವಾಡಿಕೆ.

ಧೋತಿ-ಗಮೋಚಾ ತೊಟ್ಟ ಯುವಕರು ಹಾಗೂ ಮೇಖಲಾ-ಜಾದೊರ್ ಉಟ್ಟ ಯುವತಿಯರು ಚುರುಕಾಗಿ ಹೆಜ್ಜೆ ಹಾಕುತ್ತ, ಕೈಗಳನ್ನು ತಿರುವುತ್ತ ಢೋಲ್, ತಾಲ್, ಪೇಪಾ, ಟೋಕಾ, ಬಾನ್ಹಿ, ಕ್ಸುತುಲಿ, ಗೊಗೊನಾ ಮುಂತಾದ ವಾದ್ಯಗಳ ಲಯಕ್ಕೆ ತಕ್ಕನಾಗಿ ಸಂತೋಷದಿಂದ ಕುಣಿಯುತ್ತಾರೆ. ನಿಶ್ಚಿತ ಭಂಗಿ, ತೋಳು ಮುಂಗೈನÀ ಬಿರುಸಿನ ಚಲನೆ, ಗಿರಕಿ ಹೊಡೆಯುವದು ಮುಂತಾದವುಗಳಿಂದ ಕೂಡಿದ ‘ಬಿಹು ನೃತ್ಯ’ ತನ್ನ ಶುದ್ಧತೆ ಮತ್ತು ಅಸಲೀತನದಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದೆ. ತಮ್ಮ ಎಳವೆಯಿಂದಲೇ ಬಿಹು ನೃತ್ಯ ಪ್ರಕಾರದಲ್ಲಿ ತಾಲೀಮು ಪಡೆದಿರುವ ರಣಜಿತ್ ಕುಮಾರ್ ಗೊಗೊಯಿ ಅಸ್ಸಾಮಿನ ಇತರ ಕಲಾ ಪ್ರಕಾರಗಳಾದ ಓಜಾ ಢೋಲ್ ಬಡಾನಾ, ತುಕಾರಿಗಳಲ್ಲೂ ಪ್ರಾವೀಣ್ಯತೆ ಪಡೆದಿದ್ದಾರೆ. ನೃತ್ಯ, ಸಂಗೀತ, ರಂಗಸಜ್ಜಿಕೆ, ಸಂಗೀತ, ಸಂಯೋಜನೆ ಹಾಗೂ ನಿರ್ದೇಶನಗಳಲ್ಲಿ ಅಪಾರ ಪರಿಶ್ರಮವಿರುವ ಗೊಗೊಯಿ ನಿಜವಾದ ಅರ್ಥದಲ್ಲಿ ಅಸ್ಸಾಮಿನ ಸಾಂಸ್ಕøತಿಕ ಹರಿಕಾರ, ರಷ್ಯಾ, ದಕ್ಷಿಣ ಆಫ್ರಿಕಾ, ಸೀಶೇಲ್ಸ್, ಮಾರಿಷನ್, ಭೂತಾನ್, ಜರ್ಮನಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದ ಅನೇಕ ದೇಶಗಳಲ್ಲಿ ಅಸ್ಸಾಮಿನ ಸಂಸ್ಕøತಿಯನ್ನು ಪ್ರದರ್ಶಿಸಿ ಮನ್ನಣೆಗಳಿಸಿದ್ದಾರೆ ಎಂದು ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.