ಕುಶಾಲನಗರ, ಜು. 10: ಹಿರಿಯ ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಸುಮಾರು ಅರ್ಧಗಂಟೆಗೂ ಅಧಿಕ ಸಮಯ ಗಣಪತಿ ಅವರ ತಂದೆ, ಪತ್ನಿ ಹಾಗೂ ಸಹೋದರ ರೊಂದಿಗೆ ಸಾಂತ್ವನ ಹೇಳಿ ಸಮಾಲೋಚನೆ ನಡೆಸಿದರು. ನ್ಯಾಯ ದೊರೆಯುವವರೆಗೂ ಕುಟುಂಬ ದೊಂದಿಗೆ ತಾವಿರುವದಾಗಿ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕೊಲೆಗಡುಕ ಸರ್ಕಾರವಾಗಿದೆ. ರಾಜ್ಯ ಸರ್ಕಾರದಿಂದ ಇದುವರೆಗೂ ನ್ಯಾಯ ದೊರೆತಿಲ್ಲ. ಪ್ರತಿಪಕ್ಷಗಳು ಹಾಗೂ ಜನತೆ ಒಂದಾಗಿ ಸಂಘಟಿತವಾಗಿ ರಾಜ್ಯ ಸರ್ಕಾರವನ್ನು ಕಿತ್ತೊಗೆಯ ಬೇಕಾಗಿದೆ. ಇತರ ಪ್ರತಿಪಕ್ಷಗಳೊಂದಿಗೆ ಸಮಾಲೋಚಿಸಿ ಕಾಂಗ್ರೆಸ್‍ನ ಶಾಸಕರೊಂದಿಗೆ ಮಾತನಾಡಿ, ಸದನದಲ್ಲಿ ಸೋಮವಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ದಕ್ಷ ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ ಕುಮಾರಸ್ವಾಮಿ ಸರ್ಕಾರಕ್ಕೆ ನಾಚಿಕೆ ಅನ್ನುವದೇ ಇಲ್ಲ ಎಂದರು. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಮಾಧ್ಯಮದೊಂದಿಗೆ ಹೆಸರಿಸಿದ ಮೂವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಇನ್ನೋರ್ವ ಅಧಿಕಾರಿ ಮೋಹನ್ ಎಂಬವರು ಮುಖ್ಯಮಂತ್ರಿಯ ಕಿರುಕುಳದ ಆರೋಪ ಮಾಡಿದ್ದು, ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವದು ಎಂದು ಹೇಳಿದರು.

ಈ ಸಂದರ್ಭ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ, ಜಿಲ್ಲಾಧ್ಯಕ್ಷ ಎಸ್.ವಿ. ಭರತ್‍ಕುಮಾರ್, ಮುಖಂಡರಾದ ವಿ.ಎಂ. ವಿಜಯ ಹಾಗೂ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ್ ಹಾಗೂ ಇನ್ನಿತರರು ಇದ್ದರು.