*ಗೋಣಿಕೊಪ್ಪಲು, ಆ. 6: 3ನೇ ವಿಭಾಗದ ಗುಡಿಸಲು ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವದು ಎಂದು ಗ್ರಾ.ಪಂ ಸದಸ್ಯ ಸುರೇಶ್ ರೈ ತಿಳಿಸಿದ್ದಾರೆ.

3ನೇ ವಿಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಗುಡಿಸಲು ನಿವಾಸಿಗಳು ವಾಸವಾಗಿದ್ದಾರೆ. ಇದುವರೆಗೆ ಇವರಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಇಲ್ಲಿನ ನಿವಾಸಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡು ವಿದ್ಯುತ್ ಸಂಪರ್ಕ ನೀಡಲು ಮುಂದಾಗುವದಾಗಿ ತಿಳಿಸಿದರು.

ಆದರೆ 3ನೇ ವಾರ್ಡಿನ ಕಾಂಗ್ರೆಸ್ ಸದಸ್ಯರುಗಳಾದ, ಮಂಜುಳ ಹಾಗೂ ಮುರುಗ ಕಾನೂನು ಅರಿವಿಲ್ಲದೆ ನಿವಾಸಿಗಳ ಹಾದಿ ತಪ್ಪಿಸುತ್ತಿದ್ದಾರೆ. ಪಂಚಾಯ್ತಿ ವಿರುದ್ಧ ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನೀಡುತ್ತಿದ್ದಾರೆ.

ಅಧ್ಯಕ್ಷರಿಗೆ ವಿನಾಕಾರಣ ಕಿರುಕುಳ ನೀಡುವದೆ ಇವರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ 3ನೇ ವಾರ್ಡಿನ ಜನರನ್ನು ಪ್ರತಿಭಟನೆ ನಡೆಸುವಂತೆ ಒತ್ತಾಯಪೂರ್ವಕ ವಾಗಿ ಗ್ರಾ.ಪಂ.ಗೆ ಕರೆತಂದು ಪಂಚಾಯ್ತಿಯ ಶಾಂತಿ ಕದಡಲು ಮುಂದಾಗುತ್ತಿದ್ದಾರೆ. ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

3ನೇ ವಾರ್ಡಿನ ಗುಡಿಸಲು ನಿವಾಸಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಮನವಿ ನೀಡಲು ಪಂಚಾಯ್ತಿಗೆ ಆಗಮಿಸಿದರು. ಆದರೆ 3ನೇ ವಾರ್ಡಿನ ಕಾಂಗ್ರೆಸ್ ಸದಸ್ಯರು ಇದನ್ನು ಪ್ರತಿಭಟನೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಜನರನ್ನು ಗೊಂದಲಕ್ಕೆ ಒಳಗಾಗಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಮಾತನಾಡಿದ 3ನೇ ವಾರ್ಡಿನ ಗುಡಿಸಲು ನಿವಾಸಿಗಳಾದ ರಾಣಿ, ಜಯಲಕ್ಷಿ, ಶಶಿ ಕಮಲ, ಸುಮ, ಚೆಲುವ, ಸತೀಶ್ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪರಶುರಾಮ್ ಇವರುಗಳು ನಮ್ಮ ಸಮಸ್ಯೆಯ ಬಗ್ಗೆ ಮನವಿ ನೀಡಲು ಪಂಚಾಯ್ತಿಗೆ ತೆರಳಿದೆವು. ಯಾವದೇ ಪ್ರತಿಭಟನೆ ಹಾಗೂ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ರಾಜೇಶ್ ಮಾತನಾಡಿ 3ನೇ ವಾರ್ಡಿನಲ್ಲಿ ಸುಮಾರು 85ಕ್ಕೂ ಹೆಚ್ಚು ಮನೆಗಳಿವೆ. ಈ ಹಿಂದೆ ಬಸವ ವಸತಿ ಯೋಜನೆಯಡಿ 80 ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಆದೇಶ ಬಂದಿತು. ಆದರೆ ಇಲ್ಲಿನ ನಿವಾಸಿಗಳಲ್ಲಿ ಮೂಲ ದಾಖಲಾತಿಗಳಾದ ಜಾತಿ ಪ್ರಮಾಣ ಪತ್ರ ಮತ್ತು ದೃಢೀಕರಣ ಪತ್ರಗಳು ಇಲ್ಲದೇ ಇರುವದರಿಂದ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪಲಾನುಭವಿಗಳಿಗೆ ಮನೆ ನಿರ್ಮಿಸಲು ಬಂದಂತಹ ಹಣ ಸರಕಾರ ಹಿಂಪಡೆದಿದೆ. ಈ ಬಗ್ಗೆ ದಾಖಲಾತಿಗಳು ಇವೆ. ಈ ಮಾಹಿತಿಗಳನ್ನು ಅರಿಯದೆ ಕಾನೂನು ತೊಡಕುಗಳ ಬಗ್ಗೆ ತಿಳಿಯದೆ ಗ್ರಾ.ಪಂ ಸದಸ್ಯರಾದ ಮುರುಗ ಹಾಗೂ ಮಂಜುಳ ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಮಗ್ನವಾಗಿದ್ದಾರೆ. ಪಂಚಾಯಿತಿ ವತಿಯಿಂದ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸದೆ ಜನರ ಸಮಸ್ಯೆಗಳನ್ನು ಆಲಿಸದೆ ಮತ್ತೊಬ್ಬರನ್ನು ಆರೋಪಿಸುತ್ತಾ ಅವರ ವಿರುದ್ಧ ಜನರನ್ನು ಎತ್ತಿಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭ ಮಾಜಿ ಗ್ರಾ.ಪಂ ಸದಸ್ಯ ಸುರೇಶ್ ಹಾಜರಿದ್ದರು.