ಗೋಣಿಕೊಪ್ಪಲು, ಆ. 22: ಬೆಂಗಳೂರು ಅಮ್ನೆಸ್ಟಿ ಅಂತರ್ರಾಷ್ಟ್ರೀಯ ಸಂಸ್ಥೆಯನ್ನು ನಿಷೇಧಿಸಲು ಒತ್ತಾಯಿಸಿ ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹಿ ಕೃತ್ಯ ಎಸಗಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು, ಪ.ಪೂ. ಕಾಲೇಜು, ಕಾವೇರಿ ಪಾಲಿಟೆಕ್ನಿಕ್‍ನ ಸುಮಾರು 1500ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗೋಣಿಕೊಪ್ಪಲು ಬಸ್ ನಿಲ್ದಾಣದವರೆಗೆ ಮೆರವಣಿಗೆಯಲ್ಲಿ ತೆರಳಿ ಬಳಿಕ ಸಮಾವೇಶಗೊಂಡು ದೇಶ ವಿದ್ರೋಹಿ ಚಟುವಟಿಕೆ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಹಾಗೂ ಗ್ರಾ.ಪಂ.ಗೆ ಮನವಿ ಸಲ್ಲಿಸಿದರು.
ಜಿಲ್ಲಾ ಎ.ಬಿ.ವಿ.ಪಿ. ಸಂಘಟನಾ ಕಾರ್ಯದರ್ಶಿ ಸಿದ್ಧರಾಜು, ಗೋಣಿಕೊಪ್ಪಲು ನಗರ ಕಾರ್ಯದರ್ಶಿ ವಿದ್ಯಾ, ಸಹಕಾರ್ಯದರ್ಶಿ ಆಶ್ರಿತಾ, ಪೂಜಾ, ತಾಲೂಕು ಸಂಚಾಲಕ ಅಜಯ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಕಾವೇರಿ ಕಾಲೇಜು ಬಿಎಸ್‍ಸಿ ವಿದ್ಯಾರ್ಥಿ ಗಣೇಶ್ ಮಾತನಾಡಿದರು.
ಎಬಿವಿಪಿ ನಗರ ಸಮಿತಿ ಸದಸ್ಯರಾದ ಪ್ರಶೋಬ್, ಅಯ್ಯಪ್ಪ ಮುಂತಾದವರು ಉಪಸ್ಥಿತರಿದ್ದರು.
-ಟಿ.ಎಲ್. ಶ್ರೀನಿವಾಸ್.