ಗೋಣಿಕೊಪ್ಪಲು, ಮೇ 10: ಗೋಣಿಕೊಪ್ಪಲು ಕಸ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಎಲ್ಲೆಂದರಲ್ಲಿ ಕಸದ ರಾಸಿ ಕಣ್ಣಿಗೆ ರಾಚುತ್ತಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಅಲ್ಲಲ್ಲಿಯೇ ಕಸದ ಗುಡ್ಡೆ ಗೋಚರಿಸುತ್ತಿದ್ದು, ಇಲ್ಲಿನ ಜನ ಪ್ರತಿನಿಧಿಗಳು ತಮಗೇನೂ ಸಂಬಂಧ ವಿಲ್ಲವೆಂಬಂತೆ ಓಡಾಡುವದು ಕಂಡು ಬಂದಿದೆ. ಮಾರುಕಟ್ಟೆ ವ್ಯಾಪ್ತಿಯಲ್ಲಿಯೂ ಕಸದ ರಾಸಿ ಹಾಗೇ ಬಿದ್ದಿದೆ. ಇಲ್ಲಿನ ಪೌರ ಕಾರ್ಮಿಕರು ಅಸಹಾಯಕರಾಗಿದ್ದು ಕಸವನ್ನು ಚೀಲದಲ್ಲಿ ತುಂಬಿಸಿ ಅಲ್ಲಲ್ಲೇ ದಾಸ್ತಾನು ಮಾಡುವದು ಕಂಡು ಬಂದಿದೆ.
ಮಾಜಿ ಗ್ರಾ.ಪಂ. ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಅವರು ಕಸ ವಿಲೇವಾರಿ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದರಾದರೂ ಅವರಿಗೆ ಸಹಕಾರ ದೊರೆಯದ ಹಿನ್ನೆಲೆ ಎಲ್ಲಾ ಹೊಣೆಯನ್ನು ತಾವೇ ಹೊತ್ತು ನಿಭಾಯಿಸಿದ್ದರು. ಗೋಣಿಕೊಪ್ಪಲು ಗ್ರಾ.ಪಂ. ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಇಲ್ಲಿನ ಪರಿಮಳ ಮಂಗಳ ವಿಹಾರ ಹಿಂಭಾಗ ಖಾಸಗಿ ಜಮೀನಿನಲ್ಲಿ ಕಸ ವಿಲೇವಾರಿಗೆ ಅಡ್ಡಿ ಎದುರಾಗಿತ್ತು.
ಪೌರ ಕಾರ್ಮಿಕರು ಬೆಳಿಗ್ಗೆ ಕಸವನ್ನು ಟ್ರ್ಯಾಕ್ಟರ್ ಇತ್ಯಾದಿಗಳಲ್ಲಿ ತುಂಬಿ ಹಾಗೇ ಬಿಡುತ್ತಿದ್ದು, ರಾತ್ರಿ ಅಲ್ಲಿ-ಇಲ್ಲಿ ಸಿಕ್ಕ ಜಾಗದಲ್ಲಿ ತ್ಯಾಜ್ಯವನ್ನು ಸುಡುವ ಕೆಲಸ ಮಾಡುತ್ತಿದ್ದರು. ಹರಿಶ್ಚಂದ್ರಪುರದಲ್ಲಂತೂ ರಾತ್ರಿಯ ವೇಳೆ ರಸ್ತೆ ಇಕ್ಕೆಲಗಳಲ್ಲಿ ಕಸವನ್ನು ಸುಡುವದು ಸಾಮಾನ್ಯವಾಗಿತ್ತು. ಇಲ್ಲಿನ ಉಮಾ ಮಹೇಶ್ವರಿ ದೇವಸ್ಥಾನ ಹಿಂಭಾಗ, ಹಳೇ ಜಾನುವಾರು ಮಾರುಕಟ್ಟೆ, ಕಿತ್ತಳೆ ಬೆಳೆಗಾರರ ಸಂಘದ ಹಿಂಭಾಗ ಕೀರೆ ಹೊಳೆ ದಡ, ಕೈಕೇರಿ ತೋಡು ಸಮೀಪ, ಬೈಪಾಸ್ ರಸ್ತೆ ಆಸುಪಾಸಿನಲ್ಲಿ ವಿಲೇವಾರಿಯಾಗುತ್ತಿದ್ದ ಕಸ ಪ್ರವಿ ಮೊಣ್ಣಪ್ಪ ಅವರಿಂದಾಗಿ ಹಾತೂರಿನ ಕೃಷಿಕರ ನಿವೇಶನದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ನಂತರ ಸುಮಾರು 800 ಲಾರಿಗೂ ಅಧಿಕ ಕಸವನ್ನು ಅರುವತ್ತೊಕ್ಕಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಅವರು ಹಳ್ಳಿಗಟ್ಟುವಿನ ತಮ್ಮ ನಿವೇಶನ ಸಮೀಪ ಸುರಿಯಲು ಅವಕಾಶ ಮಾಡಿಕೊಟ್ಟು ಸಹಕರಿಸಿದ್ದರು.
ಈ ನಡುವೆ ಗ್ರಾ.ಪಂ. ಅಧ್ಯಕ್ಷರಿಗೆ ಆಪ್ತರಾಗಿದ್ದ ಕಸವಿಲೇವಾರಿ ಉಸ್ತುವಾರಿ ವಹಿಸಿದ್ದ ಕುಮಾರ್ ಎಂಬ ಗುತ್ತಿಗೆದಾರನನ್ನು ಇತರೆ ಬಿಜೆಪಿ ಸದಸ್ಯರೇ ಕಳೆದ ದಸರಾ ನಾಡಹಬ್ಬ ಸಂದರ್ಭ ಕೈಬಿಟ್ಟು ಉಸ್ತುವಾರಿಯನ್ನು ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ. ರಾಜೇಶ್‍ಗೆ ವಹಿಸಿದ್ದರು. ಆದರೆ, ಕಸ ವಿಲೇವಾರಿಗೆ ಸೂಕ್ತ ಜಾಗ ಸಿಗದ ಸಂದರ್ಭ ಇಲ್ಲಿನ ಪರಿಮಳ ಮಂಗಳ ವಿಹಾರ ಹಿಂಭಾಗ ವಿಲೇವಾರಿ ಮಾಡಲು ಕುಟುಂಬಸ್ಥ ರೊಬ್ಬರು ತಮ್ಮ ಖಾಸಗಿ ಜಾಗ ಬಿಟ್ಟುಕೊಟ್ಟಿದ್ದರು. ಇದೀಗ ಅಲ್ಲಿ ಕಸ ವಿಲೇವಾರಿಗೆ ಅವಕಾಶ ನಿರಾಕರಣೆ ಯಾದ ನಂತರ ನಗರದಲ್ಲಿ ಎಲ್ಲೆಂದರಲ್ಲಿ ಕಸ ದಿನನಿತ್ಯ ತುಂಬತೊಡಗಿದೆ.
ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುವತ್ತೊಕ್ಕಲು ಗ್ರಾ.ಪಂ.ಅಧ್ಯಕ್ಷ ಸುಗುಣ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದ ರಾದರೂ ಉದ್ಧೇಶಿತ ಹಳ್ಳಿಗಟ್ಟು ಕಸವಿಲೇವಾರಿಗೆ ಕಾದಿರಿಸಲಾಗಿದ್ದ ಸೀತಾ ಕಾಲೋನಿಯಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಹಿನ್ನಡೆ ಉಂಟಾಗಿದೆ.
ಇದೀಗ ಗೋಣಿಕೊಪ್ಪಲು ಗ್ರಾ.ಪಂ. ಆಡಳಿತ ಬಹುಮತ ದೊಂದಿಗೆ ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದರೂ ಅಧ್ಯಕ್ಷ ಸ್ಥಾನ ಮೀಸಲಾತಿಯೊಂದಿಗೆ ಬಿಜೆಪಿಯ ಸೆಲ್ವಿಯ ಪಾಲಾಗಿದೆ. ಇಲ್ಲಿನ ಜಿ.ಪಂ. ಹಾಗೂ ತಾ.ಪಂ. ಸ್ಥಾನಗಳೆರಡು ಬಿಜೆಪಿ ವಶವಾಗಿದ್ದು ಕಾಂಗ್ರೆಸ್ ಜನಪ್ರತಿನಿಧಿಗಳು ಗೋಣಿಕೊಪ್ಪಲು ಕಸ ವಿಲೇವಾರಿ ಸಮಸ್ಯೆಗೆ ಪರಿಹಾರವನ್ನು ಬಿಜೆಪಿ ಮುಖಂಡರನ್ನು ಕೇಳಿ ಎಂದು ಹೇಳುತ್ತಿದ್ದಾರೆ. ಇತ್ತ ಬಿಜೆಪಿ ಜನಪ್ರತಿನಿಧಿಗಳು ಇದು ತಮಗೆ ಸಂಬಂಧಿಸಿದ್ದಲ್ಲವೆಂದು ತಣ್ಣಗೆ ಕುಳಿತಿದ್ದಾರೆ. ಒಟ್ಟಿನಲ್ಲಿ ಗೋಣಿಕೊಪ್ಪಲು ನಗರ ದಿನೇ ದಿನೇ ಕಸದ ಕೊಂಪೆಯಾಗಿ ಮಾರ್ಪಡುತ್ತಿದ್ದು, ಮುಂದೆ ಇದು ಸಾಂಕ್ರಾಮಿಕ ರೋಗಗಳಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ. ಇಲ್ಲಿ ಪ್ರಜ್ಞಾವಂತ ನಾಗರಿಕರೆನಿಸಿ ಕೊಂಡವರು, ಹೊಟೇಲ್, ಅಂಗಡಿ-ಮಳಿಗೆ ವರ್ತಕರು, ಇತರೆ ವ್ಯಾಪಾರಿ ಗಳು, ಬಡಾವಣೆ ನಿವಾಸಿಗಳು ಇದು ತಮಗೆ ಸಂಬಂಧಿಸಿದ ಕೆಲಸವಲ್ಲ ವೆಂದು ಬಗೆದು ದಿನೇ ದಿನೇ ರಸ್ತೆ ಇಕ್ಕೆಲಗಳಲ್ಲೂ ಕಸವನ್ನು ತಂದು ಸುರಿಯುತ್ತಿದ್ದಾರೆ.
ವಿಭಿನ್ನ ರಾಜಕೀಯ ಪರಿಸ್ಥಿತಿಯಲ್ಲಿ ಇಲ್ಲಿನ ಪೌರ ಕಾರ್ಮಿಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಸೀತಾ ಕಾಲೋನಿ ವೈಜ್ಞಾನಿಕ ಕಸವಿಲೇವಾರಿಗೆ ಸುಮಾರು ರೂ. 1 ಕೋಟಿಗೂ ಅಧಿಕ ಖರ್ಚು ತಗಲುತ್ತಿದೆ ಎನ್ನಲಾಗಿದ್ದು, ಕೆಲಸ ಕುಂಟುತ್ತಾ ಸಾಗಿದೆ. ಪೆÇನ್ನಂಪೇಟೆ ಗ್ರಾ.ಪಂ. ಕಸ ವಿಲೇವಾರಿಯನ್ನು ಅಲ್ಲಿನ ನ್ಯಾಯಾಲಯದ ಮುಂದೆ ಮಾಡಲಾಗುತ್ತಿದ್ದು, ನ್ಯಾಯಾಧೀಶರು ಸಾರ್ವಜನಿಕ ಸ್ಥಳದಲ್ಲಿ ಕಸ ವಿಲೇವಾರಿಗೆ ತಡೆಯಾಜ್ಞೆ ನೀಡಿದ್ದರು. ಮಾರ್ಚ್ ಅಂತ್ಯದವರೆಗೆ ಕಸ ವಿಲೇವಾರಿಗೆ ಅವಕಾಶ ನೀಡಿದ್ದರೂ ಇದೀಗ ಅಲ್ಲಿಯೂ ಕಸ ವಿಲೇವಾರಿ ಮುಂದುವರಿದಿದೆ. ಗೋಣಿಕೊಪ್ಪಲಿ ನಲ್ಲಿ ಕಸವಿಲೇವಾರಿಗೆ ಯಾವದೇ ನಿವೇಶನವಿಲ್ಲದೆ ಎಲ್ಲೆಂದರಲ್ಲಿ ಕಸದ ರಾಸಿ ಕಂಡು ಬರುತ್ತಿದ್ದು ಅಸಹನೀಯವೆನಿಸಿದೆ.
- ಟಿ.ಎಲ್. ಶ್ರೀನಿವಾಸ್