ಸೋಮವಾರಪೇಟೆ, ಸೆ. 28: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಳೆಯಾಗದೇ ಬರಗಾಲದ ಛಾಯೆ ಆವರಿಸಿದ್ದು, ಸರ್ಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಹೆಚ್.ಹೆಚ್. ಧರ್ಮಾಚಾರಿ ಅವರ ಅಧ್ಯಕ್ಷತೆಯಲ್ಲಿ ನವದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ನಡೆಯಿತು. ಗೌಡಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬರಗಾಲದ ಭೀತಿ ಇದೆ. ಕೇವಲ 35 ಇಂಚಿನಷ್ಟು ಮಳೆಯಾಗಿದೆ. ಇಲಾಖೆಯ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಕಾಡಾನೆ ಹಾವಳಿಯಿಂದ ಫಸಲು ನಷ್ಟ ಅನುಭವಿಸಿದ ರೈತಾಪಿ ವರ್ಗ ಪರಿಹಾರ ಪಡೆಯಲು ದಾಖಲೆಗಳನ್ನು ಸಂಗ್ರಹಿಸಿಲು ನೂರಾರು ರೂಪಾಯಿ ಖರ್ಚು ಮಾಡಬೇಕಾಗಿದೆ. ಕೇವಲ ಆರ್‍ಟಿಸಿ, ಹಾನಿ ಬಗ್ಗೆ ಫೋಟೊ ಪಡೆದು ಪರಿಹಾರ ನೀಡುವಂತೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಿ.ಎಲ್. ಮಂಜುನಾಥ್, ಕೂಗೂರು ಗ್ರಾಮದ ಜಯಪ್ಪ, ರಾಜಪ್ಪ ಒತ್ತಾಯಿಸಿದರು.

ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸ್ಪಷ್ಟ ಅದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸುವಂತೆ ಗ್ರಾಮಸಭೆ ನಿರ್ಣಯಿಸಿತು. ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಅಧ್ಯಕ್ಷ ಹೆಚ್.ಹೆಚ್. ಧರ್ಮಾಚಾರಿ ಸಭೆಗೆ ಭರವಸೆ ನೀಡಿದರು. ಕೊಡಗು ಜಿಲ್ಲೆಯಲ್ಲಿ 30 ರಿಂದ 40 ರಷ್ಟು ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿದ್ದು, ರೋಗ ಹರಡುವ ಸೊಳ್ಳೆ ನಿರ್ಮೂಲನಕ್ಕೆ ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಹೇಳಿದರು. ಗ್ರಾಮೀಣ ನಿವಾಸಿಗಳು, ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಸೋಮವಾರದಿಂದ ಗುರವಾರದ ತನಕ ವೈದ್ಯರು ಲಭ್ಯವಿರುತ್ತಾರೆ. ಆಸ್ಪತ್ರೆಯಲ್ಲಿ ಹುಚ್ಚು ನಾಯಿ ಹಾಗೂ ಹಾವು ಕಡಿತದ ಲಸಿಕೆಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಗೌಡಳ್ಳಿಯ ಆಸ್ಪತ್ರೆ ವ್ಯಾಪ್ತಿಯಲ್ಲಿ ರೋಗಿಗಳು ಹೆಚ್ಚಿದ್ದು, ವಾರದ ಆರು ದಿನ ವೈದ್ಯರ ಸೇವೆ ಬೇಕಾಗಿದೆ ಎಂದು ಎಸ್.ಎ. ಸುರೇಶ್, ಎಂ.ಪಿ. ರವಿ ಒತ್ತಾಯಿಸಿದರು. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸುವದಾಗಿ ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಹೇಳಿದರು. ವೇದಿಕೆಯಲ್ಲಿ ಪಿಡಿಓ ಲಿಖಿತಾ, ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ನೋಡೆಲ್ ಅಧಿಕಾರಿ ಡಾ. ಶ್ರೀದೇವ್, ಗ್ರಾ.ಪಂ. ಉಪಾಧ್ಯಕ್ಷೆ ನಾಗರತ್ನ, ಎಸ್.ಎನ್. ಪೃಥ್ವಿ, ಎಂ.ಡಿ. ಹರೀಶ್, ಹೆಚ್.ಎಂ. ಜಿತೇಂದ್ರ, ಸವಿತ, ಕೆ.ಎನ್. ಲಕ್ಷ್ಮೀ, ಶಿವಮ್ಮ, ಪ್ರೇಮ ಸೇರಿದಂತೆ ಇತರರು ಉಪಸ್ಥಿತರಿದ್ದರು.