ಮಡಿಕೇರಿ, ಡಿ. 22: ಕೊಡಗಿನ ಜಮ್ಮಾ ಬಾಣೆ ಹಿಡುವಳಿಯ ಕುರಿತಾಗಿ ಕಂದಾಯ ನಿಗದಿ ಮಾಡುವದಿಲ್ಲ ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆ ಬಾಲಿಶವಾದದ್ದು ಎಂದು ಅಖಿಲ ಕೊಡವ ಸಮಾಜದ ಕೇಂದ್ರ ಸಮಿತಿ ಸಭೆಯಲ್ಲಿ ಆಕ್ಷೇಪ ವ್ಯಕ್ತಗೊಂಡಿದೆ. ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಕೊಡವ ಸಮಾಜದ ಕೇಂದ್ರ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಹೊಣೆಗಾರಿಕೆಯ ಹುದ್ದೆಯಲ್ಲಿರುವ ಸಚಿವರು ಅಸಂವಿಧಾನಿಕವಾಗಿ ಈ ಹೇಳಿಕೆ ನೀಡಿದ್ದಾರೆ. ಶಾಸಕಾಂಗ ತೆಗೆದು ಕೊಂಡಿರುವ ನಿರ್ಣಯವನ್ನು ಕಡೆಗಣಿಸಿ ಪೂರ್ವಾಗ್ರಹ ಪೀಡಿತರಂತೆ ಮಾತನಾಡಿರುವದು ವಿಷಾದನೀಯ ಹಾಗೂ ಖಂಡನೀಯವಾಗಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸೂಕ್ತವಾಗಿ ಪ್ರತಿಕ್ರಿಯಿಸಬೇಕೆಂದು ಕೇಂದ್ರ ಸಮಿತಿ ಒತ್ತಾಯಿಸಿದೆ.
ಒಣ ಹುಲ್ಲು ಮಾರಾಟ
ನಿರ್ಬಂಧಕ್ಕೆ ಆಕ್ಷೇಪ
ಜಿಲ್ಲೆಯಲ್ಲಿ ಒಣ ಹುಲ್ಲು ಮಾರಾಟದ ಬಗ್ಗೆ ನಿಯಂತ್ರಣ ಹೇರಿರುವದನ್ನು ಸಮಿತಿ ವಿರೋಧಿಸಿದೆ. ಕೊಡಗು ಜಿಲ್ಲೆಯ ಕೃಷಿಕರು ಮಳೆಯಾಧಾರಿತ ವ್ಯವಸಾಯ ಗಾರರಾಗಿದ್ದು,
(ಮೊದಲ ಪುಟದಿಂದ) ಇಲ್ಲಿ ಕೇವಲ ವರ್ಷಕ್ಕೆ ಒಮ್ಮೆ ಮಾತ್ರ ಭತ್ತದ ಬೆಳೆ ಬೆಳೆಯಲು ಸಾಧ್ಯವಿದೆ. ಅತಿವೃಷ್ಟಿ-ಅನಾವೃಷ್ಟಿಯ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಿ ಕಷ್ಟಪಟ್ಟು ದುಡಿದು ಫಲಾಪೇಕ್ಷೆ ಮಾಡುವ ಸಂದರ್ಭ ನಿಯಂತ್ರಣ ಹೇರಿ ಕೃಷಿಕರಿಗೆ ತೊಂದರೆ ಕೊಡುವದು ಸರಿಯಲ್ಲ. ಇದೀಗ ಜಿಲ್ಲಾಡಳಿತ ಒಂದು ಟನ್‍ಗೆ ರೂ. 6 ಸಾವಿರದಂತೆ ಹುಲ್ಲು ಖರೀದಿಸಿ ಶೇಖರಿಸಲು ಸೂಚಿಸಿದ್ದರೂ ಈ ಮೊತ್ತ ರೈತರಿಗೆ ಸಾಕಾಗುವದಿಲ್ಲ. ರೈತರಿಗೆ ಅನುಕೂಲವಾಗುವ ದರ ಸಿಗುವಂತಾಗಬೇಕು. ಬಯಲು ಸೀಮೆಯ ವ್ಯವಸ್ಥೆಗೂ ಕೊಡಗು ಜಿಲ್ಲೆಯ ಪರಿಸ್ಥಿತಿಗೂ ವ್ಯತ್ಯಾಸವಿದೆ ಎಂದು ಸಮಾಜದ ಅಧ್ಯಕ್ಷ ಮೊಣ್ಣಪ್ಪ ಹೇಳಿದ್ದಾರೆ. ರೈತರಿಗೆ ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗಬೇಕು ಎಂದು ಅವರು ಹೇಳಿದರು.
ಕೊಲ್ಲಿತೋಡು ಯೋಜನೆಗೆ ವಿರೋಧ
ದಕ್ಷಿಣ ಕೊಡಗಿನಿಂದ ಹುಣಸೂರಿಗೆ ನೀರು ಹರಿಸುವ ಉದ್ದೇಶಿತ ಕೊಲ್ಲಿತೋಡು ಯೋಜನೆ ಸಮಂಜಸವಲ್ಲ. ಇದರಿಂದ ಆ ಭಾಗದಲ್ಲಿ ಭವಿಷ್ಯದಲ್ಲಿ ಅಪಾಯ ಎದುರಾಗಲಿರುವ ಸಾಧ್ಯತೆ ಇದೆ. ಅತಿವೃಷ್ಟಿ ಸಂದರ್ಭದಲ್ಲಿ ಅನಹುತ ಸಂಭವಿಸಿ, ಆಸ್ತಿಪಾಸ್ತಿಗೆ ಹಾನಿಯಾಗುವ ಅಪಾಯವಿದೆ. ಈ ಹಿಂದೆ ಬರಪೊಳೆ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದ ಸಂದರ್ಭ ಆಗಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗ್ಗಡೆ ಅವರು ಜಿಲ್ಲೆಯಲ್ಲಿ ಇಂತಹ ಯಾವದೇ ನೀರಾವರಿ ಯೋಜನೆ ಕೈಗೊಳ್ಳುವದಿಲ್ಲ ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ವಾಗ್ದಾನ ನೀಡಿದ್ದನ್ನು ಈಗಿನ ಸರಕಾರಗಳು ಗಮನಿಸಬೇಕಲ್ಲದೆ, ಈ ಯೋಜನೆಯನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.