ಗೋಣಿಕೊಪ್ಪಲು, ಜು. 23: ಕೊಡಗು ಜಿಲ್ಲೆಯ ವಿಧಾನ ಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲನ್ನಪ್ಪಲು ಪಕ್ಷ ಸಂಘಟನೆಯ ಲೋಪ ಹಾಗೂ ಬಲವರ್ಧನೆಯಲ್ಲಿ ಎಡವಿರುವದು ಕಾರಣವಾಗಿದೆ. ಜಿಲ್ಲೆಯ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ, ಪಕ್ಷವನ್ನು ವೈಯಕ್ತಿಕ ಹಿತಾಸಕ್ತಿಗೆ ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆ ಮಡಿಕೇರಿ ತಾಲೂಕು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದೆ. ವೀರಾಜಪೇಟೆ ತಾಲೂಕಿನಲ್ಲಿ ಮಾತ್ರ ಪಕ್ಷ ಒಂದಷ್ಟು ಚೇತರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಬಲವರ್ಧನೆಗೆ ಶೀಘ್ರವೇ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸರ್ವ ಸಮ್ಮತ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಪಿ.ಕೆ. ಪೆÇನ್ನಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವಿ.ಕೆ. ಪೆÇೀಕುಟ್ಟಿ ಅವರು ಒತ್ತಾಯಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಗಲಭೆ ಸಂದರ್ಭ ಪ್ರದೀಪ್ ರಾಜೀನಾಮೆ ನಂತರ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ತೀವ್ರ ಹಿನ್ನಡೆ ಉಂಟಾಯಿತು. ಈ ಹಿನ್ನೆಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೂಡಲೇ ನೂತನ ಅಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಇದೀಗ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ನಂತರ ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವಧಿಯಲ್ಲಿ ಮತ್ತೆ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕಂಡುಬಂದಿದೆ. ನೂತನ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರ ಬಗ್ಗೆಯೂ ಜಿಲ್ಲೆಯ ಜನತೆಯಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕೊಡಗಿನ ಜಮ್ಮಾಬಾಣೆಗೆ ಕಂದಾಯ ನಿಗದಿ ಮಾಡುವ ನಿಟ್ಟಿನಲ್ಲಿ ಸಚಿವ ಸೀತಾರಾಮ್ ಮುಂದಾಗಿರುವದು ಉತ್ತಮ ಬೆಳವಣಿಗೆ.

ಆದರೆ ಜಿಲ್ಲೆಯ ಕಾರ್ಯಕರ್ತರಿಗೆ ಇದೀಗ ಉತ್ತಮ ನಾಯಕನ ಅವಶ್ಯಕತೆ ಕಂಡು ಬಂದಿದ್ದು, ಪಕ್ಷದ ವರಿಷ್ಠರು ಈ ಬಗ್ಗೆ ತುರ್ತು ಸ್ಪಂದನೆ ನೀಡಿದಲ್ಲಿ ಮತ್ತೆ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆ ಸಾಧ್ಯ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಪಕ್ಷದ ಹಿರಿಯರು, ಪ್ರಮುಖರು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಪಕ್ಷದ ಹಿತೈಷಿಗಳಿಗೆ ಸರ್ವ ಸಮ್ಮತವಾದ ಉತ್ತಮ ನಾಯಕತ್ವ ಗುಣ ಇರುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವ ತುರ್ತು ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.