ಮಡಿಕೇರಿ, ಅ. 4: ಮಡಿಕೇರಿಯ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ನಿನ್ನೆ ಖಾಕಿ ಪಡೆ ದಿಢೀರ್ ಧಾಳಿ ನಡೆಸಿದೆ. ಪೊಲೀಸ್ ಧಾಳಿಯ ಸಂದರ್ಭ ಕಾರಾಗೃಹದಲ್ಲಿರುವ ಕೆಲವು ವಿಚಾರಣಾಧೀನ ಖೈದಿಗಳು ನಿಯಮಬಾಹಿರವಾಗಿ ಹೊಂದಿದ್ದ ವಸ್ತುಗಳು ಪತ್ತೆಯಾಗಿವೆ. ಮೊಬೈಲ್ ಫೋನ್ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕಾರಾಗೃಹಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ. ವಿವಿಧ ಬ್ಯಾರಕ್‍ಗಳಲ್ಲಿ ಕೆಲವು ಮಂದಿ ವಿಚಾರಣಾಧೀನ ಖೈದಿಗಳು ಮೊಬೈಲ್ ಫೋನ್ ಇಟ್ಟುಕೊಂಡಿದ್ದರಲ್ಲದೆ ನಗದು ಹಣವನ್ನೂ ಹೊಂದಿದ್ದರು.

ಜಿಲ್ಲಾ ಕಾರಾಗೃಹದ ತಪಾಸಣೆ ಮಾಡುವಂತೆ ಕಾರಾಗೃಹ ಅಧೀಕ್ಷಕರು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಅಪರಾಹ್ನ 1 ರಿಂದ 3.30ರ ವೇಳೆಯಲ್ಲಿ ಪೊಲೀಸ್ ಅಧಿಕಾರಿಗಳು ದಿಢೀರ್ ಧಾಳಿ ನಡೆಸಿದ್ದಾರೆ.

ಎಸ್‍ಪಿ ರಾಜೇಂದ್ರ ಪ್ರಸಾದ್ , ತಹಶೀಲ್ದಾರ್ ಎ.ಎ. ಕುಸುಮ, ಡಿವೈಎಸ್‍ಪಿ ಎಸ್.ಬಿ. ಛಬ್ಬಿ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್, ನಗರ ವೃತ್ತ ನಿರೀಕ್ಷಕ ಮೇದಪ್ಪ, ಡಿಸಿಐಬಿ ಇನ್ಸ್‍ಪೆಕ್ಟರ್ ಲಿಂಗಪ್ಪ, ಜಿಲ್ಲಾ ಶಸಸ್ತ್ರದಳದ ವೃತ್ತ ನಿರೀಕ್ಷಕ ತಿಮ್ಮಪ್ಪ ಗೌಡ ಹಾಗೂ ಸಿಬ್ಬಂದಿ, ನಗರ ಠಾಣೆಯ ಎಸ್‍ಐ ಭರತ್, ಗ್ರಾಮಾಂತರ ಎಸ್‍ಐ ಶಿವಪ್ರಕಾಶ್, ಅಪರಾಧ ವಿಭಾಗದ ಎಸ್‍ಐ ಬೋಜಪ್ಪ, ಬಾಂಬ್ ನಿಷ್ಕ್ರಿಯದಳದ ಅಧಿಕಾರಿಗಳು ಮತ್ತು ಜೈಲು ಅಧೀಕ್ಷಕರು ಹಾಗೂ ಸಿಬ್ಬಂದಿಗಳು ಕಾರಾಗೃಹ ತಪಾಸಣೆ ನಡೆಸಿದ್ದಾರೆ.ಬ್ಯಾರಕ್ 1ರ ಟಾಯ್ಲೆಟ್‍ನಲ್ಲಿ ಒಂದು ಮೊಬೈಲ್ ಫೋನ್ ಹಾಗೂ ರೂ. 2,600 ನಗದು, ಬ್ಯಾರಕ್ 2ರಲ್ಲಿ ಒಂದು ಮೊಬೈಲ್ ಹಾಗೂ 3,700 ನಗದು, ಬ್ಯಾರಕ್ 3ರಲ್ಲಿ ಒಂದು ಮೊಬೈಲ್ ಹಾಗೂ ರೂ. 440 ಮತ್ತು ಚಾರ್ಜರ್ ವಶವಾಗಿದೆ. ಬ್ಯಾರಕ್ 4ರಲ್ಲಿ ಪ್ರತ್ಯೇಕವಾಗಿ ರೂ. 450 ಹಾಗೂ ರೂ. 2835 ನಗದು ದೊರೆತಿದ್ದರೆ, ಬ್ಯಾರಕ್ 5ರಲ್ಲಿ 2 ಮೊಬೈಲ್ ಫೋನ್ ಹಾಗೂ 8730 ನಗದು ಹಣ ಒಂದು ಎಕ್ಸಲ್ ಬ್ಲೇಡ್, ಒಂದು ಚಾಕು ವಶವಾಗಿದೆ. ಸ್ಯಾಮ್ಸಂಗ್ ಮೊಬೈಲ್ ಫೋನ್ ವಿಚಾರಣಾಧೀನ ಬಂದಿ ಹ್ಯಾರೀಸ್ ಎಂಬಾತನಿಗೆ ಸೇರಿದ್ದಾಗಿ ತಿಳಿದು ಬಂದಿದೆ.

ಬ್ಯಾರಕ್ 5 ಮತ್ತು 6ರ ಮಧÀ್ಯದ ಪ್ಯಾಸೇಜ್‍ನಲ್ಲಿ ಒಂದು ಮೊಬೈಲ್ ಫೋನ್, 3 ಚಾರ್ಜರ್, 2 ಮೊಬೈಲ್ ಫೋನ್‍ನ ಬ್ಯಾಟರಿ ಪತ್ತೆಯಾಗಿದೆ. ಬ್ಯಾರಕ್ 6 ರಲ್ಲಿ 4270 ನಗದು, 7ರಲ್ಲಿ ರೂ. 980 ಹಾಗೂ 9ರಲ್ಲಿ ರೂ. 2080 ನಗದು ಹಣ ಪತ್ತೆಯಾಗಿದೆ.

ಬಂದಿಗಳು ಕಾರಾಗೃಹದ ನಿಯಮಗಳನ್ನು ಮೀರಿ ವಸ್ತುಗಳನ್ನು ಉಪಯೋಗಿಸುತ್ತಿದ್ದುದಲ್ಲದೆ, ಹಣವನ್ನು ಇಟ್ಟುಕೊಂಡಿದ್ದ ಕುರಿತು ಸಂಬಂಧಪಟ್ಟ ಆರೋಪಿಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕಾರಾಗೃಹ ಅಧೀಕ್ಷಕರು ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಇದರಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.