ಮಡಿಕೇರಿ, ಸೆ. 17: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿ.ಸಿ.ಸಿ.)ನ ಮಹಾಸಭೆ ನಿನ್ನೆ ನಗರದ ಕೊಡವ ಸಮಾಜದಲ್ಲಿ ನಡೆಯಿತು. ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಜಿಲ್ಲಾ ವ್ಯಾಪ್ತಿಯ ಕೃಷಿಕರಿಗೆ ಅನುಕೂಲವಾಗುವಂತೆ ಕೃಷಿ ಭೂಮಿ, ಸ್ಥಿರಾಸ್ತಿ ಖರೀದಿ ಮತ್ತು ಅಭಿವೃದ್ಧಿಗಾಗಿ ರೂ. 60 ಲಕ್ಷ ಮತ್ತು ಖಾಸಗಿ ಕಂಪೆನಿಯಾದಲ್ಲಿ ರೂ. 20 ಕೋಟಿವರೆಗೆ ಸಾಲವನ್ನು ನೀಡುವ ಬೈಲಾ ತಿದ್ದುಪಡಿಗೆ ಮಹಾಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮಹಾಸಭೆಯಲ್ಲಿ ಬ್ಯಾಂಕ್‍ನ ಉಪನಿಯಮಗಳ ತಿದ್ದುಪಡಿ ಬೈಲಾವನ್ನು ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಂಡಿಸಿ, ಈ ಬಗ್ಗೆ ವಿವರಗಳನ್ನು ನೀಡಿದರು.

ತಿದ್ದುಪಡಿ ಬೈಲಾದಂತೆ ವ್ಯಕ್ತಿಗಳು, ಸಂಸ್ಥೆಗಳು, ಪಾಲುದಾರಿಕೆ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಜಿಲ್ಲೆಯಲ್ಲಿ ಕೃಷಿಭೂಮಿ, ಸ್ಥಿರಾಸ್ತಿ ಖರೀದಿಗೆ ಮತ್ತು ಅಭಿವೃದ್ಧಿಗೆ ಅನುಗುಣವಾಗಿ ಸಾಲವನ್ನು ನೀಡಲಾಗುತ್ತದೆ. ಬ್ಯಾಂಕ್‍ಗೆ ಅಡಮಾನ ನೀಡುವ ಒಟ್ಟು ಸ್ಥಿರಾಸ್ತಿಯ ಸರಕಾರಿ ಬೆಲೆಯು ಶೇ. 80 ಕ್ಕೆ ಮೀರದಂತೆ ವ್ಯಕ್ತಿಗಳಾದಲ್ಲಿ ಗರಿಷ್ಠ ರೂ. 60 ಲಕ್ಷ ಹಾಗೂ ಖಾಸಗಿ ಕಂಪೆನಿಯಾದಲ್ಲಿ ಗರಿಷ್ಠ ರೂ. 20 ಕೋಟಿ ಸಾಲವನ್ನು ನೀಡುವ ವಿಚಾರವನ್ನು ತಿಳಿಸಿದರು.

ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಸದಸ್ಯ ಭರತ್ ಮಾತನಾಡಿ, ಖಾಸಗಿ ಕಂಪೆನಿಗಳಿಗೆ ರೂ. 20 ಕೋಟಿ ಸಾಲವನ್ನು ಆಸ್ತಿ ಖರೀದಿಗೆ ನೀಡುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಖಾಸಗಿ ಕಂಪೆನಿಗಳ ಹೆಸರಿನಲ್ಲಿ ಕೋಟ್ಯಾಂತರ ಹಣ ವಂಚನೆಯಾಗುವ ಸಾಧ್ಯತೆಗಳತ್ತ ಬೊಟ್ಟು ಮಾಡಿ, ಈ ದೊಡ್ಡ ಮೊತ್ತವನ್ನು ಸಾಲವಾಗಿ ನೀಡುವದು ಸೂಕ್ತವಲ್ಲ. ಇದು ದೊಡ್ಡವರಿಗೆ ಮಾತ್ರ ಅನುಕೂಲವಾಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿಲ್ಲೆಯ ಆಸ್ತಿಯನ್ನು ಇತರರು ಖರೀದಿಸುವದನ್ನು ತಪ್ಪಿಸುವದು ಈ ಬೈಲಾ ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ. ಈ ಬೈಲಾದಂತೆ ಸಾಲ ಪಡೆಯುವವರು ತಮ್ಮ ಆಸ್ತಿ ಮತ್ತು ಖರೀದಿಸುವ ಆಸ್ತಿಯನ್ನು ಅಡಮಾನ ಇಡಬೇಕಾಗುತ್ತದೆಂದು ಸ್ಪಷ್ಟಪಡಿಸಿ, ಬೈಲಾದ ಉಪ ಕಾಲಂಗಳಲ್ಲಿ ಸ್ಥಳೀಯರಿಗಷ್ಟೇ ಇದರ ಸದುಪಯೋಗ ದೊರಕುವಂತೆ ನೋಡಿಕೊಳ್ಳಲಾಗುವದೆಂದು ಸ್ಪಷ್ಟ ಪಡಿಸಿದರು. ಜಿಲ್ಲೆಯ ಸಾಕಷ್ಟು ಸಹಕಾರ ಸಂಘಗಳಿಗೆ ಅಗತ್ಯ ಜಾಗವಿಲ್ಲ. ಈ ಹಿನ್ನೆಲೆ ನೂತನ ಬೈಲಾದಂತೆ ಜಾಗವನ್ನು ಖರೀದಿಸುವದಕ್ಕೆ ಅನುಕೂಲವಾಗುವಂತೆ ಸಹಕಾರ ಸಂಘಗಳು ಎನ್ನುವದನ್ನು ಅದರಲ್ಲಿ ಸೇರ್ಪಡೆಗೊಳಿಸಿಕೊಳ್ಳುವದು ಅಗತ್ಯವೆಂದು ಕೆಲವು ಸದಸ್ಯರು ತಿಳಿಸಿದರು. ಇದಕ್ಕೆ ಅಧ್ಯಕ್ಷರು ತಮ್ಮ ಸಹಮತ ವ್ಯಕ್ತಪಡಿಸಿದರು.

ತಿದ್ದುಪಡಿ ಬೈಲಾದಲ್ಲಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರಿಗೆ ಪ್ರಯಾಣ ಭತ್ಯೆಯನ್ನು ಪ್ರತಿ ಕಿ.ಮೀ.ಗೆ ರೂ. 12 ರಿಂದ ರೂ. 20 ಕ್ಕೆ ಹೆಚ್ಚಿಸುವ ಮತ್ತು ಸಭಾ ಭತ್ಯೆಯನ್ನು ರೂ. 1 ಸಾವಿರದಿಂದ ರೂ. 2 ಸಾವಿರಕ್ಕೆ ಹೆಚ್ಚಿಸುವ ವಿಚಾರವನ್ನು ಸಾಕಷ್ಟು ಚರ್ಚೆಯ ಬಳಿಕ ಅಧ್ಯಕ್ಷ ಬಿ.ಡಿ. ಮಂಜುನಾಥ್ ಕೈಬಿಟ್ಟರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಲಾಭಾಂಶದಲ್ಲಿ ಶೇ. 12 ಡಿವಿಡೆಂಡ್ ನೀಡುವ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು.

ಈ ಹಂತದಲ್ಲಿ ಸದಸ್ಯರು ಡಿವಿಡೆಂಡ್‍ಅನ್ನು ಶೇ. 15 ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಚರ್ಚೆಗಳು ನಡೆದು ಅಂತಿಮವಾಗಿ ಶೇ. 14 ಡಿವಿಡೆಂಡ್‍ಅನ್ನು ಅಧ್ಯಕ್ಷರು ಘೋಷಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಕೆ.ಎಂ. ಸೋಮಯ್ಯ, ಬಲ್ಲಾರಂಡ ಮಣಿ ಉತ್ತಪ್ಪ, ಪಟ್ರಪಂಡ ರಘು ನಾಣಯ್ಯ, ಹೆಚ್.ಎಂ. ರಮೇಶ್, ಕನ್ನಂಡ ಸಂಪತ್, ಕೊಡಂದೇರ ಪಿ. ಗಣಪತಿ, ಹೊಸೂರು ಸತೀಶ್ ಕುಮಾರ್, ಕೆ.ಎ. ಸುಬ್ರಮಣಿ, ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ವಿಜಯ ಕುಮಾರ್ ಉಪಸ್ಥಿತರಿದ್ದರು.

ಅತ್ಯುತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪತ್ರ ವಿತರಣೆ

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಹಕಾರ ಸಂಘಗಳಿಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಹಾಸಭೆಯಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಮಡಿಕೇರಿ ತಾಲೂಕಿನ ಉತ್ತಮ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಡಗದಾಳುವಿಗೆ ಪ್ರಥಮ, ಮೂರ್ನಾಡು ದ್ವಿತೀಯ ಮತ್ತು ಪಯಸ್ವಿನಿ ತೃತೀಯ ಸ್ಥಾನಗಳಿಸಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಚೌಡ್ಲು ಪ್ರಥಮ, ಚೆಟ್ಟಳ್ಳಿ ದ್ವಿತೀಯ, ಮಾದಾಪುರ ತೃತೀಯ, ವೀರಾಜಪೇಟೆ ತಾಲೂಕಿನಲ್ಲಿ ದೇವಣಗೇರಿ ಪ್ರಥಮ, ಹಾತೂರು ದ್ವಿತೀಯ ಮತ್ತು ವೀರಾಜಪೇಟೆ ತೃತೀಯ ಬಹುಮಾನಕ್ಕೆ ಪಾತ್ರವಾಯಿತು. ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಪೈಕಿ ಗೋಣಿಕೊಪ್ಪಲು ಎ.ಪಿ.ಸಿ.ಎಂ.ಎಸ್. ಪ್ರಥಮ, ವೀರಾಜಪೇಟೆ ಎ.ಪಿ.ಸಿ.ಎಂ.ಎಸ್. ದ್ವಿತೀಯ ಮತ್ತು ಮೂರ್ನಾಡು ಎ.ಪಿ.ಸಿ.ಎಂ.ಎಸ್. ತೃತೀಯ, ಸಹಕಾರ ದವಸ ಭಂಡಾರಗಳಿಗೆ ಸಂಬಂಧಿಸಿದಂತೆ ಬಾಡಗ ಈಶ್ವರಿ ಸಹಕಾರ ದವಸ ಭಂಡಾರ ಪ್ರಥಮ, ಹೆಗ್ಗಳ ಭಗವತಿ ಸಹಕಾರ ದವಸ ಭಂಡಾರ ದ್ವಿತೀಯ, ಬೆಳ್ಳುಮಾಡು ಸಹಕಾರ ದವಸ ಭಂಡಾರ ತೃತೀಯ ಬಹುಮಾನ ಪಡೆದುಕೊಂಡಿದೆ.

ಸ್ವಸಹಾಯ ಗುಂಪುಗಳ ರಚನೆ ಮತ್ತು ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕುಟ್ಟ ಪ್ರಥಮ, ಶನಿವಾರಸಂತೆ ದ್ವಿತೀಯ, ಭಾಗಮಂಡಲ ತೃತೀಯ, ಉತ್ತಮ ಕಾರ್ಯನಿರ್ವಹಣೆ ಮಾಡಿದ ಕೃಷಿಯೇತರ ಪತ್ತಿನ ಸಹಕಾರ ಸಂಘಗಳಲ್ಲಿ ಮಡಿಕೇರಿಯ ಕೊಡಗು ಸಹಕಾರ ಉದ್ಯೋಗಸ್ಥರ ಸಹಕಾರ ಸಂಘ ಪ್ರಥಮ, ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತ ವಿವಿಧೋದ್ದೇಶ ಸಹಕಾರ ಸಂಘ ದ್ವಿತೀಯ, ಸೋಮವಾರಪೇಟೆ, ವಿವಿಧೋದ್ದೇಶ ಸಹಕಾರ ಸಂಘ ತೃತೀಯ, ಮಹಿಳಾ ಸಮಾಜಗಳಲ್ಲಿ ವೀರಾಜಪೇಟೆ ಮಹಿಳಾ ಸಮಾಜ ಪ್ರಥಮ, ಪೊನ್ನಂಪೇಟೆ ದ್ವಿತೀಯ, ಕುಶಾಲನಗರ ತೃತೀಯ ಬಹುಮಾನ ಪಡೆದುಕೊಂಡಿದೆ.