ಮಡಿಕೇರಿ, ಮೇ 10: ಜಿಲ್ಲೆಯಲ್ಲಿ ತಾಪಮಾನ ದಿನೇ ದಿನೇ ಏರಿಕೆ ದಾಖಲಿಸುತ್ತಿದ್ದು ಹಿಂದಿನ ವರ್ಷಗಳಿಗಿಂತ ಈ ವರ್ಷ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆ ಆಗಿದೆ. ಭಾರತೀಯ ಹವಾಮಾನ ಇಲಾಖೆ ದಾಖಲಿಸಿರುವ ಅಂಕಿ ಅಂಶದ ಪ್ರಕಾರ ಕಳೆದ ಏಪ್ರಿಲ್ 27 ರಂದು ಮಡಿಕೇರಿಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಗರಿಷ್ಠ 33.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕಳೆದ ವರ್ಷದ ಏಪ್ರಿಲ್ ನ ಸರಾಸರಿ ಉಷ್ಣಾಂಶಕ್ಕಿಂತ 1 ಡಿಗ್ರಿಯಷ್ಟು ಹೆಚ್ಚಾಗಿದ್ದು, ಜಿಲ್ಲೆಯ ಕುಶಾಲನಗರ ಹಾಗೂ ಸೋಮವಾರಪೇಟೆಯ ಕೆಲ ಒಣ ಪ್ರದೇಶಗಳಲ್ಲಿ ತಾಪಮಾನ 34 ರಿಂದ 35 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.

ತಾಪಮಾನದ ಏರಿಕೆಯಿಂದಾಗಿ ಜಿಲ್ಲೆಯ ವಿದ್ಯುತ್ ಬಳಕೆಯಲ್ಲೂ ಶೇಕಡ 40 ರಿಂದ 50 ರಷ್ಟು ಗಣನೀಯವಾಗಿ ಏರಿಕೆಯಾಗಿದ್ದು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸೋಮವಾರಪೇಟೆ ತಾಲೂಕು ವಿದ್ಯುತ್ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯ (ಸೆಸ್ಕ್) ಮೂಲಗಳ ಪ್ರಕಾರ ಜಿಲ್ಲೆಯಲ್ಲಿ 2015 ರಲ್ಲಿ 70 ರಿಂದ 74 ಮೆಗಾ ವ್ಯಾಟ್ ಗಳಷ್ಟು ವಿದ್ಯುತ್ ಬಳಕೆಯಾಗಿದ್ದು ಕಳೆದ ಜನವರಿ ತಿಂಗಳಿನಿಂದ ಬಳಕೆ ಏರುಮುಖವಾಗಿದ್ದು ಇದೀಗ 95 ರಿಂದ 100 ಮೆಗಾ ವ್ಯಾಟ್ ಬೇಡಿಕೆ ಇದೆ. ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಇದೆಯಾದರೂ ವಿದ್ಯುತ್ ಕೊರತೆ ಇಲ್ಲ ಎಂದು ಹೇಳಿವೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಒಟ್ಟು ಬಳಕೆಯಾದ ವಿದ್ಯುತ್ ಪ್ರಮಾಣ 31.03 ದಶಲಕ್ಷ ಯೂನಿಟ್‍ಗಳಾಗಿದ್ದು ಇದು 2015 ರ ಮಾರ್ಚ್ ನಲ್ಲಿ 25.19 ದಶಲಕ್ಷ ಯೂನಿಟ್‍ಗಳಷ್ಟು ವಿದ್ಯುತ್ ಬಳಕೆ ಆಗಿತ್ತು. 2015 ರ ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ 17.10 ದಶಲಕ್ಷ ಯೂನಿಟ್‍ಗಳಷ್ಟು ವಿದ್ಯುತ್ ಬಳಕೆಯಾಗಿದ್ದು ಡಿಸೆಂಬರ್ ನಲ್ಲಿ 19.59 ದಶಲಕ್ಷ ಯೂನಿಟ್, 2016 ರ ಜನವರಿಯಲ್ಲಿ 22.74 ದಶಲಕ್ಷ ಯೂನಿಟ್ ಹಾಗೂ ಫೆಬ್ರವರಿಯಲ್ಲಿ 27.65 ದಶಲಕ್ಷ ಯೂನಿಟ್‍ಗಳಿಗೆ ಏರಿಕೆಯಾಗಿದೆ.

ಕುಶಾಲನಗರದಲ್ಲಿ ಕೈಗಾರಿಕೆಗಳು ಹೆಚ್ಚಿರುವ ಕಾರಣ ಮತ್ತು ನೀರಾವರಿ ಪಂಪ್‍ಸೆಟ್‍ಗಳ ಬಳಕೆ ಜಾಸ್ತಿ ಇರುವದರಿಂದ ಸೋಮವಾರಪೇಟೆ ತಾಲೂಕಿನಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದ್ದು ಕಳೆದ ಮಾರ್ಚ್ ತಿಂಗಳಿನಲ್ಲಿ 14.85 ದಶಲಕ್ಷ ಯೂನಿಟ್‍ಗಳಷ್ಟು ವಿದ್ಯುತ್ ಬಳಕೆ ಆಗಿದೆ. ಇದೇ ತಿಂಗಳಿನಲ್ಲಿ ವೀರಾಜಪೇಟೆ ತಾಲೂಕಿನ ಬಳಕೆ 12.10 ದಶಲಕ್ಷ ಯೂನಿಟ್‍ಗಳಾಗಿದ್ದರೆ ಮಡಿಕೇರಿ ತಾಲೂಕಿನ ಬಳಕೆ 4.08 ದಶಲಕ್ಷ ಯೂನಿಟ್‍ಗಳಾಗಿದೆ. ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯ ಕೃಷಿ ಪಂಪ್ ಸೆಟ್‍ಗಳ ಬಳಕೆ 4.08 ದಶಲಕ್ಷ ಯೂನಿಟ್‍ಗಳಾಗಿವೆ.

‘ಶಕ್ತಿ’ ಯೊಂದಿಗೆ ಮಾತನಾಡಿದ ಸೆಸ್ಕ್ ಕಾರ್ಯನಿರ್ವಾಹಕ ಅಭಿಯಂತರ ಸೋಮಶೇಖರ್ ಅವರು ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ವಿದ್ಯುತ್ ಬಳಕೆ ಕನಿಷ್ಟವಾಗಿದ್ದು ನಂತರದ ತಿಂಗಳುಗಳಲ್ಲಿ ಏರಿಕೆ ದಾಖಲಿಸುತ್ತಾ ಏಪ್ರಿಲ್ - ಜೂನ್ ತಿಂಗಳಿನಲ್ಲಿ ಗರಿಷ್ಠ ಪ್ರಮಾಣದಲ್ಲಿರುತ್ತದೆ ಎಂದು ತಿಳಿಸಿದರು. ಬೇಸಿಗೆಯಲ್ಲಿ ಫ್ರಿಡ್ಜ್, ಫ್ಯಾನ್, ಕೂಲರ್ ಹಾಗೂ ಕೃಷಿ ಪಂಪ್ ಸೆಟ್‍ಗಳ ಬಳಕೆಯೇ ಏರಿಕೆಗೆ ಕಾರಣವಾಗಿದ್ದು ಜಿಲ್ಲೆಯ 33 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನು 66 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಅವರು ಹೇಳಿದರು. ಸೋಮವಾರಪೇಟೆ, ಮಾದಾಪುರ, ಬಾಳೆಲೆ, ಮೂರ್ನಾಡು ಹಾಗೂ ಕೂಡಿಗೆ ಯಲ್ಲಿ 66 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (ಕೆಪಿಟಿಸಿಎಲ್) ಗೆ ಪ್ರಸ್ತಾವನೆ ಕಳುಹಿಸಲಾಗಿದ್ದು ನಿಗಮ ಶೀಘ್ರದಲ್ಲಿ ಕೆಲಸ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು. ಪುಷ್ಪಗಿರಿ ತಪ್ಪಲಿನ ಮಲ್ಲಳ್ಳಿಯಲ್ಲೂ ಸೋಮವಾರಪೇಟೆ ಮೂಲದ ಕೊಡಗು ಹೈಡಲ್ ಪವರ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ವಿದ್ಯುತ್ ಉತ್ಪಾದನೆಗೆ ಕ್ಷಣಗಣನೆಯಲ್ಲಿದೆ. ಈ ವಿದ್ಯುತ್ ಯೋಜನೆಯ ಕಾರ್ಯ ಸಂಪೂರ್ಣ ಮುಗಿದಿದ್ದು ಇಲ್ಲಿ ಮಳೆಗಾಲದಲ್ಲಿ 3 ಮೆಗಾ ವ್ಯಾಟ್ ಗಳಷ್ಟು ವಿದ್ಯುತ್ ಉತ್ಪಾದನೆ ಆಗಲಿದೆ. ಮಳೆಗಾಲ ಆರಂಭಗೊಂಡ ಕೂಡಲೇ ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದ್ದು ಈ ವಿದ್ಯುತ್ ಅನ್ನು ಗ್ರಿಡ್‍ಗೆ ಸರಬರಾಜು ಮಾಡಲಾಗುವದು ಎಂದು ಕಂಪೆನಿ ತಿಳಿಸಿದೆ. -ಕೋವರ್ ಕೊಲ್ಲಿ ಇಂದ್ರೇಶ್