ಗೋಣಿಕೊಪ್ಪಲು, ಜೂ. 28: ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣ ಭಾಗದಲ್ಲಿ ಯುವಜನಾಂಗವನ್ನು ಸ್ವಾವಲಂಭಿಯಾಗಿ ರೂಪಿಸುವ ನಿಟ್ಟಿನಲ್ಲಿ ಜಾಮೀನು ರಹಿತವಾಗಿ ರೂ. 2 ಲಕ್ಷ, ರೂ. 5 ಲಕ್ಷ ಹಾಗೂ ರೂ. 10 ಲಕ್ಷದವರೆಗೆ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಶಿಶು, ಕಿಶೋರ್ ಹಾಗೂ ತರುಣ್ ಯೋಜನೆಯನ್ನು ಜಾರಿಗೆ ತಂದರು. ಆದರೆ, ಜಿಲ್ಲೆಯ ಬ್ಯಾಂಕ್ ವ್ಯವಸ್ಥಾಪಕರು ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಸಾಲ ಸೌಲಭ್ಯ ಕಲ್ಪಿಸದ ಹಿನ್ನೆಲೆ ತೀವ್ರ ಹಿನ್ನಡೆಗೆ ಕಾರಣರಾಗಿದ್ದಾರೆ. ಯಾವದೇ ಯೋಜನೆಯ ಅವಧಿ ಮೀರಿಲ್ಲ. ಹೀಗಿದ್ದೂ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳು ಜನತೆಗೆ ತಪ್ಪು ಮಾಹಿತಿ ನೀಡುವ ಮೂಲಕ ಕೇಂದ್ರದ ಯೋಜನೆ ಇಲ್ಲಿ ಸಾಕಾರವಾಗಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯ ಹೊಸಕೋಟೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಲ್ಪಿಸಲಾದ ರೂ. 5 ಲಕ್ಷ ವೆಚ್ಚದ ಸಮುದಾಯಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಗೆ ರಾಜ್ಯ ಸಭಾ ಸದಸ್ಯೆ ಹೇಮಮಾಲಿನಿ ರೂ. 25 ಲಕ್ಷ ಅನುದಾನ ಒದಗಿಸಿದ್ದು, ವೆಂಕಯ್ಯನಾಯ್ಡು ಅವಧಿಯಲ್ಲಿಯೂ ವಾರ್ಷಿಕ ರೂ. 10 ಲಕ್ಷ ಅನುದಾನ ಲಭ್ಯವಾಗುತ್ತಿತ್ತು. ಉದ್ದೇಶಿತ ಸಮುದಾಯ ಭವನ ನಿರ್ವಹಣೆ ಯನ್ನು ಸ್ತ್ರೀ ಶಕ್ತಿ ಸಂಘ ಅಥವಾ ಇನ್ನಾವದೇ ಸಂಘಗಳಿಗೆ ಬಿಳುಗುಂದ ಗ್ರಾ.ಪಂ. ನೀಡುವಂತಾಗಲಿ ಹಾಗೂ ಎಲ್ಲರಿಗೂ ಇದರ ಪ್ರಯೋಜನ ಸಿಗಲಿ ಎಂದು ಅವರು ಹೇಳಿದರು.

ಹೊಸಕೋಟೆಗೆ ಗ್ರಾಮೀಣ ರಸ್ತೆ ಸಾರಿಗೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವದು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಇದೀಗ ಮತ್ತೆ ಆರಂಭಿಸಲಾಗಿದೆ. ತನ್ನ ಸ್ಪೀಕರ್ ಅವಧಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಂತೆ ಸುಮಾರು 35 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ವಾರ್ಷಿಕವಾಗಿ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ತಲಾ 20 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲು ಅವಕಾಶವಿತ್ತು ಎಂದು ಹೇಳಿದರು. ಕೇಂದ್ರ ಸರ್ಕಾರದ ಅಪಘಾತ ವಿಮಾ ಯೋಜನೆಯನ್ನು ಎಲ್ಲರೂ ಅಳವಡಿಸಿಕೊಳ್ಳಲು ಕಿವಿಮಾತು ಹೇಳಿದರು. ಜೀವನ್ ಸುರಕ್ಷಾ, ಜೀವನ್ ಜ್ಯೋತಿ, ಭೀಮಾ ಯೋಜನೆ ಹಾಗೂ ಮುದ್ರಾ ಯೋಜನೆಯನ್ನು ಗ್ರಾಮೀಣ ಭಾಗದ ಜನತೆಯ ಅಭಿವೃದ್ಧಿಗಾಗಿಯೇ ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು.

ಅಮ್ಮತ್ತಿ ಕ್ಷೇತ್ರದ ಜಿ.ಪಂ. ಸದಸ್ಯ ಮೂಕೋಂಡ ವಿಜು ಸುಬ್ರಮಣಿ ಮಾತನಾಡಿ, ಬಿಳುಗುಂದ ಗ್ರಾಮ ಹಲವು ವರ್ಷಗಳಿಂದ ಅಭಿವೃದ್ಧಿ ವಂಚಿತವಾಗಿತ್ತು. ಕಳೆದ ಜಿ.ಪಂ. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಮುಖ್ಯರಸ್ತೆ, ಕುಡಿಯುವ ನೀರು, ದಾರಿ ದೀಪ ಹಾಗೂ ಸಮುದಾಯ ಭವನ ಇತ್ಯಾದಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಶಾಸಕರ ಮಾರ್ಗದರ್ಶನದೊಂದಿಗೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ನಿರಂತರ ಒತ್ತು ನೀಡಲಾಗುವದು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭ ಮಾತನಾಡಿದ ಬಿಳುಗುಂದ ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಪ್ರಮುಖ ಚಿಲ್ಲವಂಡ ಕಾವೇರಪ್ಪ ಅವರು, ಬಿಳುಗುಂದ ಗ್ರಾ.ಪಂ. ಹಲವು ವರ್ಷಗಳಿಂದ ಕಡೆಗಣಿಸಲ್ಪಟ್ಟ ಗ್ರಾಮವಾಗಿದ್ದು, ಇಲ್ಲಿ ರಾಜಕೀಯ ರಹಿತವಾಗಿ ಅಭಿವೃದ್ಧಿಗೆ ಎಲ್ಲರೂ ಒತ್ತು ನೀಡಬೇಕಾಗಿದೆ. ಬಿಳುಗುಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಸಂದರ್ಭ ಮಾಜಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಬೋಪಯ್ಯ ಅವರು ಭೇಟಿ ನೀಡಿದ್ದರು. ಇಲ್ಲಿನ ನಲ್ವತ್ತೊಕ್ಲು, ಹೊಸಕೋಟೆ, ಬಿಳುಗುಂದ ಗ್ರಾಮಗಳಿಗೆ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಬೇಕಾಗಿದೆ ಎಂದು ಹೇಳಿದರು.

ಬಿಳುಗುಂದ ಗ್ರಾ.ಪಂ. ಅಧ್ಯಕ್ಷೆ ಕೆ.ಎ. ಅಲೀಮಾ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸದಸ್ಯರಾದ ಹನೀಫ್, ಐನಂಡ ಪ್ರತಾಪ್, ಪ್ರವೀಣ್, ಕುಸುಮಾ, ವಸಂತಿ, ಮಲ್ಲಂಡ ಮಧು ದೇವಯ್ಯ ಮುಂತಾದವರು ಉಪಸ್ಥಿತರಿದ್ದರು. ಹೊಸೂರು ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರು ಅತಿಥಿಗಳನ್ನು ಸ್ವಾಗತಿಸಿ. ನಿರೂಪಿಸಿದರು. ಹೊಸಕೋಟೆ ಗ್ರಾಮಸ್ಥರು, ವಿವಿಧ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

- ಟಿ.ಎಲ್. ಶ್ರೀನಿವಾಸ್