ಮಡಿಕೇರಿ, ಜು. 6: ಜಿಲ್ಲೆಯ ಶಾಫಿ ಮುಸ್ಲಿಂ ಬಾಂಧವರು ಇಂದು ಈದುಲ್ ಫಿತರ್ ಹಬ್ಬವನ್ನು ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಸೀದಿಗಳಲ್ಲಿ ನಡೆದ ವಿಶೇಷ ನಮಾಜ್‍ನಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯವನ್ನು ಹಂಚಿಕೊಂಡರು.

ಮಡಿಕೇರಿ, ಎಮ್ಮೆಮಾಡು, ವೀರಾಜಪೇಟೆ, ಕುಶಾಲನಗರ, ಸೋಮವಾರಪೇಟೆ, ಕೊಂಡಂಗೇರಿ, ಗೋಣಿಕೊಪ್ಪ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ನೂರಾರು ಶಾಫಿ ಮಸೀದಿಗಳಲ್ಲಿ ಇಂದು ಶಾಫಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ನೆರವೇರಿಸಿದರು. ಹಬ್ಬದ ಪ್ರಯುಕ್ತ ಹೊಸ ಬಟ್ಟೆ ಧರಿಸಿ, ಬಂಧುಬಳಗದ ಮನೆಗೆ ತೆರಳಿ ಬಂಧುಗಳನ್ನು ಆಹ್ವಾನಿಸಿ ಭೂರಿ ಬೋಜನದೊಂದಿಗೆ ಹಬ್ಬದ ಸಂತಸವನ್ನು ಹಂಚಿಕೊಂಡರು.

*ಸಿದ್ದಾಪುರ: ಸಿದ್ದಾಪುರದ ಎಂ.ಜಿ.ರಸ್ತೆಯಲ್ಲಿರುವ ಹೀರಾ ಮಸೀದಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಖತೀಬ್ ನೂರುದ್ಧೀನ್ ಮೌಲವಿ ಸಾಮೂಹಿಕ ನಮಾಜಿನ ಮೂಲಕ ವಿಶೇಷ ಪ್ರಾರ್ಥನೆ ನೆರವೇರಿಸಿದರು

ಮುಖ್ಯ ರಸ್ತೆಯಲ್ಲಿರುವ ಜುಮ್ಮಾ ಮಸೀದಿಯಲ್ಲಿ ಬೆಳಿಗ್ಗೆ 9.30ಕ್ಕೆ ಖತೀಬ್ ಬಸೀರ್ ಬಾಖವಿ ರಂಝಾನ್ ಹಬ್ಬದ ಅಂಗವಾಗಿ ಸಾಮೂಹಿಕ ಈದ್ ನಮಾಜಿನ ಮೂಲಕ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ನೆಲ್ಯಹುದಿಕೇರಿ ಜುಮಾ ಮಸೀದಿಯಲ್ಲಿ ಖತೀಬ್ ಹನೀಪ್ ಫೈಝಿ ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ನಮಾಜಿನ ಮೂಲಕ ವಿಶೇಷ ಪ್ರಾರ್ಥನೆ ನೆರವೇರಿಸಿದರು. ನಲ್ವತ್ತೇಕರೆಯ ಜುಮಾ ಮಸೀದಿಯಲ್ಲಿ ಖತೀಬ್ ಶಾಫಿ ಮೌಲವಿ ಸಾಮೂಹಿಕ ನಮಾಜಿನ ಮೂಲಕ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ವೀರಾಜಪೇಟೆ: ಒಂದು ತಿಂಗಳಿನ ರಂಜಾನ್ ಉಪವಾಸ ವ್ರತಾಚರಣೆಯ ಪರಿಸಮಾಪ್ತಿಯೆಂಬಂತೆ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು. ದೇವನ ಅನುಗ್ರಹಗಳಿಗೆ ಕೃತಜ್ಞತೆಯನ್ನು ಸೂಚಿಸುವ ಸಲುವಾಗಿ ಆಬಾಲ ವೃದ್ಧ ವಿಶ್ವಾಸಿ ಸಹೋದರ ಸಹೋದರಿಯರು ಪ್ರದೇಶದ ಮಸೀದಿಗಳಲ್ಲಿ ವಿಶೇಷ ಈದ್ ಪ್ರಾರ್ಥನೆ(ನಮಾಝ್)ಗಾಗಿ ಮತ್ತು ಈದ್ ಪ್ರವಚನವನ್ನು ಆಲಿಸಲು ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು. ವ್ಯತಿರಿಕ್ತ ಹವಾಮಾನವನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ ಬಾಂಧವರು ನಮಾಝ್‍ನಂತರ ಈದ್ ಸಂದೇಶವನ್ನು ವಿನಿಮಯಮಾಡಿದರು.

ವೀರಾಜಪೇಟೆಯ ಮುಖ್ಯ ರಸ್ತೆಯಲ್ಲಿರುವ ಶಾಫಿ ಜುಮಾ ಮಸೀದಿಯಲ್ಲಿ ಮೌ|| ಖಲೀಲ್ ಫೈಝಿ ಇರ್ಫಾನಿ, ಖಾಸಗಿ ಬಸ್ ನಿಲ್ದಾಣದಲ್ಲಿರುವ ಶಾದುಲಿ ಜುಮಾ ಮಸೀದಿಯಲ್ಲಿ ಮೌ|| ನೌಷಾದ್ ದಾರಿಮಿ, ಮಲಬಾರ್ ರಸ್ತೆಯಲ್ಲಿರುವ ಸಲಫಿ ಜುಮಾ ಮಸೀದಿಯಲ್ಲಿ ಮೌ|| ಸಹೀದ್ ಸಲಪಿ , ಗೋಣಿಕೊಪ್ಪ ರಸ್ತೆ ವಿದ್ಯಾನಗರ ಬ್ರೈಟ್ ಕ್ಯಾಂಪಸ್ ಇಮಾಂ ಮುಸ್ಲಿಂ ಜುಮಾ ಮಸೀದಿಯಲ್ಲಿ ಮೌ|| ಅನಸ್, ಪೆರಂಬಾಡಿಯ ಖಿಳರಿಯ್ಯ ಜುಮಾ ಮಸೀದಿಯಲ್ಲಿ ಮೌ|| ಅಬ್ದುಲ್ ಜಲೀಲ್ ದಾರಿವಿ ಈದ್ ಪ್ರವಚನ ವನ್ನು ನೀಡಿ ನಮಾಝ್‍ಗೆ ನೇತೃತ್ವ ನೀಡಿದರು.

ಸೋಮವಾರಪೇಟೆ : ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು ಬುಧವಾರ ಶಾಫಿ ಬಾಂಧವರು ಸಂಭ್ರಮದಿಂದ ಆಚರಿಸಿದರು.

ಸೋಮವಾರಪೇಟೆ ಹಾಗೂ ಸುತ್ತಮುತ್ತಲಿನ ಮಸೀದಿಗಳಲ್ಲಿ ದಿನದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಕಳೆದ ಒಂದು ತಿಂಗಳಿಂದ ರಂಜಾನ್ ವ್ರತಾಚರಣೆ ಯನ್ನು ಕಟ್ಟುನಿಟ್ಟಾಗಿ ಆಚರಿಸಿ, ಆಚರಣೆಯ 30ನೇ ದಿನ ಚಂದ್ರನ ದರ್ಶನವಾದ ಹಿನ್ನೆಲೆಯಲ್ಲಿ ಮುಸ್ಲಿಂ ಧರ್ಮದ ಶಾಫಿ ಪಂಗಡದವರು ಬುಧವಾರ ಹಬ್ಬವನ್ನು ಆಚರಿಸಿದರೆ, ಹನಫಿ ಬಾಂದವರು ಗುರುವಾರ ಆಚರಿಸಲಿದ್ದಾರೆ.

ಸೋಮವಾರಪೇಟೆ ಹೊರ ವಲಯದಲ್ಲಿನ ಬಜೆಗುಂಡಿಯ ಖಿಳಾರಿಯಾ ಮಸೀದಿಯಲ್ಲಿ, ಪಟ್ಟಣದ ಜಲಾಲಿಯ ಮಸೀದಿ, ತಣ್ಣೀರುಹಳ್ಳ, ಕಾಗಡಿಕಟ್ಟೆ, ಕಲ್ಕಂದೂರು, ಐಗೂರು, ಹೊಸತೋಟ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಈ ಸಂದರ್ಭ ಪತ್ರಿಕೆಯೊಂದಿಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಬಜೆಗುಂಡಿ ಖಿಳóರಿಯಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ನಾಡಿಗೆ ಮಳೆ, ಬೆಳೆ, ಆರೋಗ್ಯ ಸೇರಿದಂತೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಅಲ್ಲಾಹುನಲ್ಲಿ ಪ್ರಾರ್ಥಿಸಲಾಯಿತು ಎಂದರು.