ಸೋಮವಾರಪೇಟೆ, ಜ.7: ಟಿಪ್ಪರ್ ಹಾಗು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲ್ಕಂದೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಇಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ನಡೆದಿದೆ.

ಕಲ್ಕಂದೂರು ಬಾಣೆಯ ಕಾರ್ಮಿಕರಾದ ಶಿವ ಎಂಬವರ ಪುತ್ರ ಜಗದೀಶ್(28) ಎಂಬವರೇ ದುರ್ಮರಣಕ್ಕೀಡಾದ ದುರ್ದೈವಿ. ಇಂದು ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಜಗದೀಶ್ ತನ್ನ ಸ್ನೇಹಿತನ ಬೈಕ್ (ಕೆ.ಎ. 03 ಇ.ಯು. 2441) ನಲ್ಲಿ ತೋಳೂರುಶೆಟ್ಟಳ್ಳಿ ಕಡೆಗೆ ತೆರಳುತ್ತಿದ್ದ ಸಂದರ್ಭ ತೋಳೂರು ಶೆಟ್ಟಳ್ಳಿ ಕಡೆಯಿಂದ ಸೋಮವಾರ ಪೇಟೆಗೆ ಬರುತ್ತಿದ್ದ ಸತ್ಯ ಎಂಬಾತ ಚಾಲಿಸುತ್ತಿದ್ದ ಟಿಪ್ಪರ್(ಕೆ.ಎ.12 ಎ. 9795) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ತಲೆ ಸೇರಿದಂತೆ ದೇಹದ ಇತರ ಭಾಗಕ್ಕೆ ತೀವ್ರ ಗಾಯವಾದ ಪರಿಣಾಮ ಸ್ಥಳದಲ್ಲೇ ಜಗದೀಶ್ ಸಾವನ್ನಪ್ಪಿದ್ದಾರೆ.

ಢಿಕ್ಕಿ ಸಂಭವಿಸಿದ ಪರಿಣಾಮ ಟಿಪ್ಪರ್ ವಾಹನದ ಅಡಿಭಾಗಕ್ಕೆ ಸಿಲುಕಿದ ಬೈಕ್ ಹಾಗೂ ಜಗದೀಶ್ ಅವರನ್ನು ಗಮನಿಸದ ಟಿಪ್ಪರ್ ಚಾಲಕ ಸುಮಾರು 20 ಮೀಟರ್ ದೂರದಷ್ಟು ಎಳೆದೊಯ್ದಿದ್ದಾನೆ. ಪರಿಣಾಮ ಬೈಕ್ ಸಹಿತ ಜಗದೀಶ್ ನಜ್ಜುಗುಜ್ಜಾಗಿದ್ದು, ಜಗದೀಶ್ ಅವರ ಕುತ್ತಿಗೆ, ಕೈಕಾಲು, ಸೊಂಟದ ಭಾಗ ಮುರಿತಕ್ಕೊಳಗಾಗಿ ವಾಹನದ ಅಡಿಭಾಗದಲ್ಲೇ ಸಾವನ್ನಪ್ಪಿದ್ದಾರೆ.

ಟಿಪ್ಪರ್ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಘಟನೆ ನಡೆದ ನಂತರ ಚಾಲಕ ಸತ್ಯ ಸ್ಥಳದಿಂದ ಪರಾರಿಯಾಗಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಘಟನೆಯ ಭೀಕರತೆಗೆ ಟಿಪ್ಪರ್‍ನ ಅಡಿಭಾಗ ಸಿಲುಕಿದ್ದ ಮೃತದೇಹ ಹಾಗೂ ಬೈಕ್‍ನ್ನು ಜೆಸಿಬಿಯಂತ್ರ ಬಳಸಿ ಹೊರತೆಗೆಯಬೇಕಾಯಿತು. ಮೃತ ಜಗದೀಶ್ ಕೂಲಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ. ಗಂಡನನ್ನು ಕಳೆದುಕೊಂಡ ಪತ್ನಿಯ ರೋಧನ ಮುಗಿಲು ಮುಟ್ಟಿದ್ದರೆ, ತಂದೆಯ ಸಾವಿನ ಬಗ್ಗೆ ಏನೂ ತಿಳಿಯದ ಮಕ್ಕಳ ಮುಗ್ಧತೆ ಮನಕಲಕುವಂತಿತ್ತು. ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ.