ಸೋಮವಾರಪೇಟೆ,ಅ.27: ಕೊಡಗಿನಲ್ಲಿ ಕೊಡವರು ಹಾಗೂ ಹಿಂದೂಗಳ ಮೇಲೆ ಧಾಳಿ ನಡೆಸಿ, ಮತಾಂತರ ಮಾಡಿದ ಟಿಪ್ಪುವಿನ ಜನ್ಮ ದಿನಾಚರಣೆಯನ್ನು ಆಚರಿಸಲು ಹೊರಟಿರುವ ಸರ್ಕಾರದ ವಿರುದ್ಧ ಹೋರಾಡಲು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿಯೊಂದಿಗೆ ಕೈ ಜೋಡಿಸಬೇಕೆಂದು ಸಮಿತಿಯ ತಾಲೂಕು ಅಧ್ಯಕ್ಷ ಟಿ.ಕೆ. ರಮೇಶ್ ಮನವಿ ಮಾಡಿದರು.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಮೇಲೆ ಟಿಪ್ಪು ನಡೆಸಿದ ಕಲ್ಪನಾತೀತ ದಬ್ಬಾಳಿಕೆ, ದೌರ್ಜನ್ಯ, ಮತಾಂತರ, ಕೊಲೆಗಳ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದರೂ ಸಹ ಕಾಂಗ್ರೆಸ್ ಸರ್ಕಾರ ಕೇವಲ ಒಂದು ವರ್ಗದ ತುಷ್ಟೀಕರಣಕ್ಕೆ ಮುಂದಾಗಿ ಕೊಡಗಿನಲ್ಲಿ ಅಶಾಂತಿಗೆ ಮುಂದಾಗಿ ರುವದು ಖಂಡನೀಯ ಎಂದರು.

ಕಳೆದ ವರ್ಷ ನಡೆದ ಜಯಂತಿಯಲ್ಲಿ ಕೋಮು ಸಂಘರ್ಷ ಏರ್ಪಟ್ಟು ಇಡೀ ಜಿಲ್ಲೆ ನಲುಗಿದ್ದರೂ ಸಹ ಮತ್ತದೇ ತಪ್ಪನ್ನು ಪುನರಾವರ್ತಿಸಲು ಸರ್ಕಾರ ಮುಂದಾಗಿದೆ. ಎಲ್ಲಾ ಜನಾಂಗಗಳು ಶಾಂತಿ ಸೌಹಾರ್ಧತೆಯಿಂದ ನೆಲೆಸಿರುವ ಕೊಡಗಿನಲ್ಲಿ ಕೋಮುದಳ್ಳುರಿ ನಡೆಸಲು ಸರ್ಕಾರವೇ ಮುಂದಾಗಿರುವದು ಅಕ್ಷಮ್ಯ ಎಂದು ರಮೇಶ್ ಹೇಳಿದರು.

ಕೊಡಗಿನ ಧಾರ್ಮಿಕ ಕ್ಷೇತ್ರಗಳ ಮೇಲೆ ಟಿಪ್ಪು ಮಾಡಿದ ಧಾಳಿ ಎಲ್ಲಾ ಜನಾಂಗಗಳಿಗೆ ನೋವು ತರಿಸುವ ವಿಚಾರವಾಗಿದೆ. ಭಾಗಮಂಡಲ ಸೇರಿದಂತೆ ಹಲವಾರು ದೇವಸ್ಥಾನಗಳು ಆತನ ಕೌರ್ಯಕ್ಕೆ ಸಾಕ್ಷಿಯಾಗಿವೆ. ಮಹಿಳೆಯರ ಮೇಲೆ ನಡೆಸಿದ ಹಿಂಸೆ, ಅತ್ಯಾಚಾರ, ದೌರ್ಜನ್ಯಗಳನ್ನು ಯಾವೊಬ್ಬ ಹಿಂದುವೂ ಸಹಿಸಲಾಗದು. ಇಂತಹ ಕ್ರೂರ ವ್ಯಕ್ತಿತ್ವದ ಟಿಪ್ಪುವಿನ ಜಯಂತಿಯನ್ನು ಎಲ್ಲಾ ಜನಾಂಗದವರು ಜಾತಿ, ಧರ್ಮದ ಭೇದ ಮರೆತು ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದು ರಮೇಶ್ ಹೇಳಿದರು.

ಜಯಂತಿಯನ್ನು ಆಚರಿಸಿಯೇ ಸಿದ್ಧ ಎಂದು ಟೊಂಕಕಟ್ಟಿ ನಿಂತಿರುವ ಸರ್ಕಾರದ ಕ್ರಮದ ವಿರುದ್ಧ ಎಲ್ಲಾ ಸಂಘ ಸಂಸ್ಥೆಗಳು ನಿರ್ಣಯ ಕೈಗೊಂಡು, ಜಿಲ್ಲಾಡಳಿತ ಹಾಗೂ ಸರ್ಕಾರ ಜಯಂತಿಯನ್ನು ಆಚರಿಸದಂತೆ ಒತ್ತಡ ಹೇರಬೇಕು. ಈ ಸಂಬಂಧಿತ ನಡೆಯುವ ಹೋರಾಟ ಗಳಿಗೆ ಎಲ್ಲಾ ಸಮಾಜಗಳೂ ಬೆಂಬಲ ನೀಡಬೇಕೆಂದು ರಮೇಶ್ ಮನವಿ ಮಾಡಿದರು. ಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷ ಸಿ.ಎಸ್. ಮಣಿ, ಪಿ.ಡಿ. ಮೋಹನ್‍ದಾಸ್, ಕಾರ್ಯದರ್ಶಿ ರೂಪಾ ಸತೀಶ್, ವೆಂಕಪ್ಪ ಹೆಚ್.ಎಸ್. ಉಪಸ್ಥಿತರಿದ್ದರು.