ಗೋಣಿಕೊಪ್ಪಲು, ನ. 6: ಟಿಪ್ಪು ಜಯಂತಿ ಆಚರಣೆ ವಿರುದ್ಧ ದೊಡ್ಡ ಮಟ್ಟದ ಆಂದೋಲನ ನಡೆಸಿ ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಗುವದು ಎಂದು ಇಗ್ಗುತಪ್ಪ ಕೊಡವ ಸಂಘ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ ತಿಳಿಸಿದ್ದಾರೆ.
ಕಳೆದ ಬಾರಿ ಜಯಂತಿ ಆಚರಣೆ ಮೂಲಕ ಜಿಲ್ಲೆಯನ್ನು ಒಡೆಯುವ ಪ್ರಯತ್ನ ನಡೆದಿತ್ತು. ಪ್ರಾಣ ಹಾನಿಗೂ ಕಾರಣವಾಗಿತ್ತು. ಇದರಿಂದಾಗಿ ಸಮಾಜವನ್ನು ಒಡೆಯುವ ಇಂತಹ ಆಚರಣೆಗಳನ್ನು ವಿರೋಧಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಂದು ವರ್ಗವನ್ನು ಮೆಚ್ಚಿಸಲು ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಿದಂತಾಗಿದೆ. ಸರ್ಕಾರ ಸಮಾಜದ ಭಾವನೆಗಳನ್ನು ಕದಲಿಸುವ ಪ್ರಯತ್ನ ಮಾಡಬಾರದು. ಅಲ್ಪಸಂಖ್ಯಾತ ವರ್ಗ ಕೂಡ ಇಂತಹ ಆಚರಣೆಯನ್ನು ವಿರೋಧಿಸಿ, ಸಮಾಜವನ್ನು ಒಂದಾಗಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕೊಡಗು ಜಿಲ್ಲೆಗೆ ಅನ್ಯಾಯವೆಸಗಿರುವ ಕ್ರಮವನ್ನು ಕಾವೇರಿ ನೀರಿನಿಂದ ಜೀವಿಸುತ್ತಿರುವ ಪ್ರತಿಯೊಬ್ಬರೂ ಇಂತಹ ಆಚರಣೆಯನ್ನು ವಿರೋಧಿಸಬೇಕು ಎಂದರು. ನಿರ್ದೇಶಕ ಪೊನ್ನಿಮಾಡ ಸುರೇಶ್ ಮಾತನಾಡಿ, ಕೊಡಗಿನ ನಂಬಿಕೆಯ ದೇವರ ವಿಗ್ರಹಗಳನ್ನು ವಿಘ್ನಗೊಳಿಸಿದ ಟಿಪ್ಪು ಜಯಂತಿ ಆಚರಣೆ ಮೂಲಕ ಹಳೆಯ ನೆನಪುಗಳನ್ನು ಕೆದಕುವ ಪ್ರಯತ್ನ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಜಯಂತಿ ಆಚರಣೆಯನ್ನು ಸರ್ಕಾರ ನಿಲ್ಲಿಸಬೇಕು ಎಂದರು.
ಇದೇ ವಿಷಯವಾಗಿ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ, ಕೊಡವ ಸಮಾಜಗಳ ವಿರುದ್ಧ ಹೇಳಿಕೆ ನೀಡಿರುವದು ಅವರ ವೃದ್ಧಾಪ್ಯದ ಪಾಂಡಿತ್ಯವನ್ನು ತಿಳಿಸುತ್ತಿದೆ. ಕೊಡವರಿಗೆ ಹೆಚ್ಚು ಅನ್ಯಾಯವಾಗಿರುವಾಗ ಟಿಪ್ಪು ಜಯಂತಿ ಆಚರಣೆಗೆ ವಿರೋಧಿಸುವದು ಸರಿಯಾದ ನಿರ್ಧಾರ. ಸಮಾಜವನ್ನು ಇನ್ನಷ್ಟು ಒಡೆಯಲು ಸುಬ್ಬಯ್ಯ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗಿಂತ ಹೆಚ್ಚು ಇತಿಹಾಸ ತಿಳಿದವರು ಜಿಲ್ಲೆಯಲ್ಲಿದ್ದಾರೆ. ಅವರಲ್ಲಿ ಮಾತ್ರ ಪಾಂಡಿತ್ಯ ಇದೆ ಎಂಬದು ಅವರ ಮೂಢನಂಬಿಕೆ ಎಂದರು. ಗೋಷ್ಠಿಯಲ್ಲಿ ಖಜಾಂಚಿ ಚಿರಿಯಪಂಡ ಪೂಣಚ್ಚ, ನಿರ್ದೇಶಕ ರತಿ ಅಚ್ಚಪ್ಪ ಇದ್ದರು.