ನಾಪೆÇೀಕ್ಲು, ಜೂ. 10: ಜಿಲ್ಲೆಯ ಅತೀ ಎತ್ತರದ ಬೆಟ್ಟ ಎಂದು ಖ್ಯಾತಿಗಳಿಸಿರುವ ಕಕ್ಕಬೆ ಸಮೀಪದ ತಡಿಯಂಡ ಮೋಳ್ ಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಕಾಡಾನೆ ಭೀತಿ ಉಂಟಾಗಿದೆ.
ಎರಡು ಮರಿ ಆನೆ ಸೇರಿದಂತೆ 10 ರಿಂದ 12 ಕಾಡಾನೆಗಳ ಹಿಂಡು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ಇದನ್ನು ಕಂಡ ಪ್ರವಾಸಿಗರು ಭಯ ಭೀತರಾಗಿ ಹಿಂತಿರುಗಿದ ಪ್ರಸಂಗ ನಡೆದಿದೆ. ತಡಿಯಂಡ ಮೋಳ್ ಬೆಟ್ಟ ಸಾಲಿನ ಯವಕಪಾಡಿ, ಮರಂದೋಡ, ಚೇಲಾವರ ಗ್ರಾಮಗಳಲ್ಲಿ ಕೆಲವು ತಿಂಗಳುಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರನ್ನು ಆತಂಕಗೀಡು ಮಾಡಿರುವದಲ್ಲದೆ, ಕಾಫಿ, ಅಡಿಕೆ, ಬಾಳೆ ಸೇರಿದಂತೆ ಎಲ್ಲಾ ಬೆಳೆಗಳನ್ನು ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಪ್ರದೇಶಗಳಲ್ಲಿ ವಾಹನ ಸೌಲಭ್ಯವಿಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಸಾಗಬೇಕಾಗಿದ್ದು, ಆನೆ ಭೀತಿಯಿಂದ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಾಡಾನೆ ಹಾವಳಿ ಯವಕಪಾಡಿ ಗ್ರಾಮದ ಅಪ್ಪಾರಂಡ ಕುಟುಂಬಸ್ಥರ, ಕಾಪಳ ಜನಾಂಗದ, ಕುಡಿಯ ಜನಾಂಗದ ಕೃಷಿಗಳೊಂದಿಗೆ ಮರಂದೋಡ ಹಾಗೂ ಚೇಲಾವರ ಗ್ರಾಮದ ಗ್ರಾಮಸ್ಥರ ಕೃಷಿ ಫಸಲು ಧ್ವಂಸಗೊಳಿಸಿದೆ. ಅರಣ್ಯ ಇಲಾಖೆ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಗ್ರಾಮಸ್ಥರು, ತಪ್ಪಿದ್ದಲ್ಲಿ ಕೃಷಿ ನಾಶವಾಗಿರುವದರೊಂದಿಗೆ ತಡಿಯಂಡ ಮೋಳ್ ಬೆಟ್ಟಕ್ಕೆ ಭೇಟಿ ನೀಡುವ ಅಮಾಯಕ ಪ್ರವಾಸಿಗರು ಕಾಡಾನೆಗಳಿಗೆ ಬಲಿಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ. - ಪಿ.ವಿ. ಪ್ರಭಾಕರ್