ಸೋಮವಾರಪೇಟೆ, ಜು. 1: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ಸೇರಿದಂತೆ ಇತರೆಡೆಗಳಲ್ಲಿ ಬರೆ ಕುಸಿತ ಸಂಭವಿಸುತ್ತಿದ್ದು, ಕೂಲಿ ಕಾರ್ಮಿಕರ ವಾಸದ ಮನೆಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡಗಳ ಮೇಲೆ ನಿರ್ಮಾಣವಾಗಿರುವ ಮನೆಗಳು ಅಪಾಯದಲ್ಲಿವೆ.

ತಣ್ಣೀರುಹಳ್ಳ ಗ್ರಾಮಕ್ಕೆ ಇಂದು ಜಿಲ್ಲಾ ಪಂಚಾಯತ್ ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಸವಿತ, ನೇರುಗಳಲೆ ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷ ದಿವಾಕರ್, ಸದಸ್ಯ ಪುರಂದರ ಸೇರಿದಂತೆ ಇತರ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ಸುರೇಶ್ ಅವರ ಮನೆಯ ಪಕ್ಕದಲ್ಲಿ ಬರೆಕುಸಿದಿರುವ ಪರಿಣಾಮ ವಾಸದ ಮನೆಗೆ ಹಾನಿಯಾಗುವ ಭೀತಿ ಎದುರಾಗಿದೆ. ಇದರೊಂದಿಗೆ ಸರೋಜ, ಜುಬೈದ, ಇಬ್ರಾಹಿಂ, ಹಸೈನಾರ್, ಲೀಲಾವತಿ, ಮುದ್ದ, ಜಯ, ಕರಿಯಪ್ಪ, ಸೋಮ, ಪ್ರದೀಪ, ಲೀಲಾ ಅವರುಗಳ ಮನೆಯ ಪಕ್ಕದಲ್ಲೂ ಬರೆ ಕುಸಿತ ಉಂಟಾಗಿದೆ.

ಗ್ರಾಮದಲ್ಲಿ ಕೂಲಿ ಕಾರ್ಮಿಕ ಕುಟುಂಬಗಳೇ ವಾಸವಿದ್ದು, ಇಕ್ಕಟ್ಟಿನ ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಮೂರುಮುಕ್ಕಾಲು ಸೆಂಟ್ ಜಾಗದಲ್ಲೂ ಸಹ 2ರಿಂದ 3 ಮನೆಗಳನ್ನು ನಿರ್ಮಿಸಲಾಗಿದ್ದು, ರಸ್ತೆ, ಚರಂಡಿಗೆ ಜಾಗ ಇಲ್ಲದಿರುವದರಿಂದ ಮಳೆಗಾಲದಲ್ಲಿ ನೀರಿನ ಸರಾಗ ಹರಿವಿಗೆ ಅಡಚಣೆಯಾಗಿದೆ. ಇದರೊಂದಿಗೆ ಬೆಟ್ಟದಂತಹ ಪ್ರದೇಶದಲ್ಲಿ ಮಣ್ಣನ್ನು ಸಮತಟ್ಟು ಮಾಡಿ ಮನೆ ನಿರ್ಮಿಸಿಕೊಂಡಿರುವದು ಬರೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜನಪ್ರತಿನಿಧಿಗಳು ಇಂದು ಸ್ಥಳಕ್ಕೆ ತೆರಳಿದ ಸಂದರ್ಭ ಗ್ರಾಮಸ್ಥರು ತಮ್ಮ ಶೋಚನೀಯ ಬದುಕನ್ನು ವಿವರಿಸಿದರು. ಕಳೆದ ಹಲವು ವರ್ಷಗಳ ನಂತರ ಇದೀಗ ಮನೆ ನಿರ್ಮಿಸಿಕೊಂಡಿದ್ದು, ಬರೆ ಕುಸಿತದಿಂದ ಜೀವಾಪಾಯ ಎದುರಿಸುವಂತಾಗಿದೆ. ಕಲ್ಲುಬಂಡೆಗಳು ಕೆಳಗುರುಳುತ್ತಿದ್ದು ಗೋಡೆ ಕುಸಿಯುವ ಭೀತಿ ಎದುರಾಗಿದೆ. ದಯವಿಟ್ಟು ತಡೆಗೋಡೆ, ಚರಂಡಿ, ರಸ್ತೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿದರು.

ಗ್ರಾಮಸ್ಥರ ಮನವಿ ಆಲಿಸಿದ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಮಳೆ ಪರಿಹಾರ ಅನುದಾನದಡಿ ಗ್ರಾಮಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಗೆ ಸೂಚಿಸಿದರು. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಲ್ಲಿಯೂ ಅನುದಾನ ಮೀಸಲಿದ್ದು, ಅಗತ್ಯ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸುವಂತೆ ಸೂಚಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಗ್ರಾಮ ಲೆಕ್ಕಿಗರಾದ ಶ್ವೇತಾ, ಪ್ರಮುಖರಾದ ಪ್ರವೀಣ್, ಬನ್ನಳ್ಳಿ ಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.