ಮಡಿಕೇರಿ, ನ. 7: ಕೊಡಗಿನ ಜನರ ವಿರೋಧದ ನಡುವೆಯೂ ರಾಜ್ಯ ಸರಕಾರ ತಾ. 10 ರಂದು ಟಿಪ್ಪು ಜಯಂತಿಯನ್ನು ಆಚರಿಸಲು ನಿರ್ಧಾರ ಕೈಗೊಂಡಿರುವದರಿಂದ ಅಂದು ಸ್ವಯಂ ಘೋಷಿತ ಕೊಡಗು ಬಂದ್ ನಡೆಸಬೇಕೆಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷÀ ಅಭಿಮನ್ಯು ಕುಮಾರ್ ಸರಕಾರದ ನಿರ್ಧಾರವನ್ನು ಖಂಡಿಸಿ ತಾ. 10 ರಂದು ಸ್ವಯಂ ಘೋಷಿತ ಬಂದ್ ಆಚರಿಸಲು ಕರೆ ನೀಡುತ್ತಿರುವದಾಗಿ ತಿಳಿಸಿದರು. ಕೊಡಗಿನ ಎಲ್ಲಾ ಸಂಘ ಸಂಸ್ಥೆಗಳು, ವ್ಯಾಪಾರಿಗಳು, ಚೇಂಬರ್ ಆಫ್ ಕಾಮರ್ಸ್, ವಾಹನ ಮಾಲೀಕರು ಮತ್ತು ಚಾಲಕರು, ತೋಟಗಳ ಮಾಲೀಕರು ಹಾಗೂ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಸರ್ವ ಜನರು ಜಾತಿ, ಮತ, ಬೇಧ ಮರೆತು ಬಂದ್‍ಗೆ ಬೆಂಬಲ ನೀಡುವಂತೆ ಕೋರಿದರು.
ಟಿಪ್ಪು ಜಯಂತಿಯನ್ನು ವಿರೋಧಿಸಿ ಬಂದ್ ಮಾತ್ರವಲ್ಲದೆ ಜೈಲ್ ಭರೋ ಚಳುವಳಿಗೂ ಸಮಿತಿ ನಿರ್ಧರಿಸಿದೆ ಎಂದು ಅಭಿಮನ್ಯು ಕುಮಾರ್ ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿಯ
) ವಿರುದ್ಧ 107 ಸೆಕ್ಷನ್‍ನಡಿ ದೂರು ದಾಖಲಿಸಲಾಗಿದ್ದು, ರಾಜ್ಯ ಸರಕಾರ ಹೋರಾಟದ ಹಕ್ಕನ್ನು ಹತ್ತಿಕ್ಕುತ್ತಿದೆ. ಪತ್ರಿಕಾಗೋಷ್ಠಿ ನಡೆಸಿದ ಕಾರಣವನ್ನು ನೀಡಿ ತಮ್ಮ ವಿರುದ್ಧವೂ ದೂರು ದಾಖಲಾಗಿದ್ದು, ಸರಕಾರ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಕೊಡಗಿನ ಬಹುತೇಕ ಎಲ್ಲಾ ಜನರು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದು, ಎಲ್ಲರನ್ನೂ ಬಂಧನಕ್ಕೊಳಪಡಿಸಲಿ ಎಂದು ಸವಾಲು ಹಾಕಿದರು. ವಿನಾಕಾರಣ ಅಮಾಯಕರ ವಿರುದ್ಧ ದೂರು ದಾಖಲಿಸಿಕೊಳ್ಳುವದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಸಮಿತಿ ಮೂಲಕ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಸರಕಾರದ ಯಾವದೇ ಗೊಡ್ಡು ಬೆದರಿಕೆಗಳಿಗೆ ಜಗ್ಗುವದಿಲ್ಲವೆಂದು ಅಭಿಮನ್ಯು ಕುಮಾರ್ ಸ್ಪಷ್ಟಪಡಿಸಿದರು.
ಕಕ್ಕಬ್ಬೆ ಗ್ರಾಮ ವ್ಯಾಪ್ತಿಯ ಮುಸಲ್ಮಾನರೇ ಖುದ್ದು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದಾರೆ. ಇದು ಸ್ವಾಗತಾರ್ಹ ನಿರ್ಧಾರವಾಗಿದ್ದು, ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ತಾ. 8 ರಂದು (ಇಂದು) ಬಿಜೆಪಿ ನಡೆಸುವ ಪ್ರತಿಭಟನೆಗೆ ಸಮಿತಿ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ ಟಿಪ್ಪು ಜಯಂತಿಯನ್ನು ಸರಕಾರ ಬಲಾತ್ಕಾರ ವಾಗಿ ಹೇರುತ್ತಿದ್ದು, ಕೆಲವರನ್ನು ಬಂಧಿಸುವ ವಿಚಾರವೂ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೋರಾಟದ ಹಕ್ಕನ್ನು ಹತ್ತಿಕ್ಕಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಿರಿಯ ಅಧಿಕಾರಿಗಳು ಜಯಂತಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, ಮುಂದೆ ಆಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗ ಬೇಕಾಗುತ್ತದೆ ಎಂದರು.
ಬಂದ್ ಇರುವ ಕಾರಣದಿಂದ ತಾ. 10 ರಂದು ವಿಹೆಚ್‍ಪಿ ಪ್ರಮುಖ ಕುಟ್ಟಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯಾ ಗ್ರಾಮ ವ್ಯಾಪ್ತಿಯಲ್ಲೇ ಮಾಡುವಂತೆ ಕರೆ ನೀಡಿದರು. ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಗ್ರಾಮದ ದೇವಾಲಯ ಗಳಲ್ಲಿ ವಿಶೇಷ ಪೂಜೆ ಸಲ್ಲಿಸವಂತೆ ರವಿಕುಶಾಲಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಮುರುಳಿ, ಸಿ.ಪಿ. ಗೋಪಾಲ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನರಸಿಂಹ ಹಾಗೂ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ರಾಬಿನ್ ಕುಟ್ಟಪ್ಪ ಉಪಸ್ಥಿತರಿದ್ದರು.