ಸೋಮವಾರಪೇಟೆ, ಅ. 6: ಸಮಾಜ ಬಾಂಧವರಲ್ಲಿ ಅರಿವು ಮತ್ತು ಸಂಘಟನೆಗಾಗಿ ತಾ. 16ರಂದು ಕೊಡ್ಲಿಪೇಟೆಯಲ್ಲಿ ಜಿಲ್ಲಾ ಮಟ್ಟದ ವೀರಶೈವ ಸಮುದಾಯ ದವರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾ ಘಟಕದ ಕ್ರೀಡಾ ಸಮಿತಿ ಅಧ್ಯಕ್ಷ ಎಸ್. ಮಹೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 16 ರಂದು ಕೊಡ್ಲಿಪೇಟೆಯ ಕಲ್ಲುಮಠದ ಆವರಣದಲ್ಲಿ ಕಲ್ಲುಮಠದ ಮಠಾಧೀಶರಾದ ಶ್ರೀ ಮಹಾಂತ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾರ್ಗದರ್ಶನದಲ್ಲಿ ಬೆಳಿಗ್ಗೆ 9.30ಕ್ಕೆ ಕ್ರೀಡಾಕೂಟ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ವೀರಶೈವ ಜನಾಂಗದ ಮಕ್ಕಳು, ಯುವಕರಲ್ಲಿ ಅರಿವು ಮೂಡಿಸುವ ಹಾಗೂ ಸಂಘಟಿಸುವ ದೃಷ್ಟಿಯಿಂದ ಹಾಗೂ ವೀರಶೈವ ಬಾಂಧವರನ್ನು ಒಗ್ಗೂಡಿಸುವ ಸಲುವಾಗಿ ಪ್ರಥಮ ವರ್ಷದ ಕ್ರೀಡಾಕೂಟ ಆಯೋಜಿಸ ಲಾಗಿದ್ದು, ಜಿಲ್ಲೆಯ ಎಲ್ಲಾ ವೀರ ಶೈವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳ ಬೇಕೆಂದು ಮನವಿ ಮಾಡಿದರು.

ಎಲ್.ಕೆ.ಜಿ., ಯು.ಕೆ.ಜಿ.ಯ ಮಕ್ಕಳಿಂದ ವಯೋವೃದ್ಧರಿಗೂ ಸಹ ಬಾಲಕ, ಬಾಲಕಿ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳನ್ನು ವಿವಿಧ ಗ್ರಾಮೀಣ ಕ್ರೀಡೆಗಳು ನಡೆಯಲಿದೆ. ಒಂಟಿಕಾಲು, ಮೂರುಕಾಲು, 100 ಮೀ ಓಟ, ಹಗ್ಗಜಗ್ಗಾಟ, ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಹೊರ ಊರುಗಳಿಂದ ಆಗಮಿಸುವ ವೀರಶೈವ ಬಾಂಧವರಿಗೆ ಕೊಡ್ಲಿಪೇಟೆ ಬಸ್ ನಿಲ್ದಾಣದಿಂದ ಶಾಲೆಗೆ ಶಾಲಾ ಬಸ್ಸ್‍ನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಕ್ರೀಡಾಕೂಟದ ದಿನದಂದೆ ಸಂಜೆ ವಿಜೇತರಿಗೆ ಬಹುಮಾನ ವಿತರಿಸಲಾಗುವದೆಂದು ತಿಳಿಸಿದರು.

ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಉಷಾ ತೇಜಸ್ವಿ ಮಾತನಾಡಿ, ತಾ. 16ರಂದು ನಡೆಯುವ ಕ್ರೀಡಾಕೂಟಕ್ಕೆ ಜಿಲ್ಲೆಯ ವೀರಶೈವ ಮಹಿಳೆಯರು ಮತ್ತು ಮಕ್ಕಳು ತಪ್ಪದೆ ಪಾಲ್ಗೊಳ್ಳವ ಮೂಲಕ ಕ್ರೀಡಾಕೂಟ ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಲಹೆಗಾರ ಡಿ.ಬಿ. ಸೋಮಪ್ಪ, ಸೋಮವಾರ ಪೇಟೆ ವೀರಶೈವ ಸಮಾಜದ ಅಧ್ಯಕ್ಷ ಕೆ.ಎನ್. ಶಿವಕುಮಾರ್, ಪ್ರಮುಖರಾದ ಹೆಚ್.ಎಸ್. ಪ್ರೇಮನಾಥ್, ಹಣಕೋಡು ಜಯರಾಜ್ ಹಾಗೂ ಗಣಗೂರು ಚಂದ್ರಶೇಖರ್ ಉಪಸ್ಥಿತರಿದ್ದರು.