ಮಡಿಕೇರಿ ಡಿ.8 : ರಾಜ್ಯ ಬಿಜೆಪಿ ಕೃಷಿ ಮೋರ್ಚಾದ ಬರ ಅಧ್ಯಯನ ತಂಡ ಡಿ.11 ರಂದು ಕೊಡ್ಲಿಪೇಟೆಯಿಂದ ಕುಟ್ಟದವರೆಗೆ ಬರದ ಕುರಿತು ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಿದೆ ಎಂದು ತಿಳಿಸಿರುವ ಜಿಲ್ಲಾ ಬಿಜೆಪಿಯ ರೈತ ಮೋರ್ಚಾ, ಕಾಫಿ ಮಂಡಳಿ ಕೊಡಗಿನ ಕಾಫಿ ಕೃಷಿಯ ಕುರಿತು ಸರ್ಕಾರಕ್ಕೆ ಅವೈಜ್ಞಾನಿಕ ವರದಿಯನ್ನು ನೀಡಿದ್ದು, ಇದನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ತಾಕೇರಿ ಪೆÀÇನ್ನಪ್ಪ, ಬರ ಅಧ್ಯಯನ ತಂಡ ನೀಡುವ ವರದಿಯನ್ನು ಸಧ್ಯದಲ್ಲೆ ತಮಿಳುನಾಡಿನಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಕೇಂದ್ರ ಸಚಿವರಿಗೆ ನೀಡಲಾಗುವದೆಂದು ಸ್ಪಷ್ಟಪಡಿಸಿದರು. ಬರ ಅಧ್ಯಯನ ತಂಡದಲ್ಲಿ ಪಕ್ಷದ ಮುಖಂಡರಾದ ರೇಣುಕಾ ಕುಮಾರ್, ಶಿವಾನಂದ ಹಾಗೂ ರೇಣುಕಾಚಾರ್ಯ ಇರಲಿದ್ದಾರೆ ಎಂದರು.

ರೈತರ ಪರವಾದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವದಾಗಿ ತಿಳಿಸಿದ ಅವರು ಕೊಡಗಿನ ಕಾಫಿ ಬೆಳೆಗಾರರು ಹಾಗೂ ರೈತರ ಬವಣೆಯನ್ನು ಸಂಸದರಾದ ಪ್ರತಾಪ ಸಿಂಹ ಹಾಗೂ ಶೋಭಾ ಕರಂದ್ಲಾಜೆ ಅವರ ಗಮನಕ್ಕೆ ತರಲಾಗಿದೆ ಎಂದರು.

ಜಿಲ್ಲೆಯಲ್ಲಿರುವ ಬೆಳೆಗಾರರು ಹಾಗೂ ರೈತರು ಬರದಿಂದ ತಮಗಾಗಿರುವ ನಷ್ಟಕ್ಕೆ ಪರಿಹಾರ ಕೋರಿ ಕೃಷಿ ಮತ್ತು ತೊಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.

ಮಡಿಕೆÉೀರಿ ತಾಲೂಕು ಅಧ್ಯಕ್ಷ ಮೇದಪ್ಪ ಮಾತನಾಡಿ, ಸರ್ಕಾರ ಭತ್ತದ ಕೃಷಿಗೆ ಒಂದು ಏಕರೆಗೆ 25 ಸಾವಿರ ರೂ. ಸಹಾಯಧನ ನೀಡಬೇಕು ಮತ್ತು ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ರೈತ ಮೋರ್ಚಾದ ಬೇಡಿಕೆಗಳು

ಭೀಕರ ಬರದಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಕೆರೆಗಳಲ್ಲಿ ನೀರಿನ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು, ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಭತ್ತ, ಕರಿಮೆಣಸು, ಜೋಳ, ಶುಂಠಿ ಬೆಳೆದ ರೈತರಿಗೆ ಬರ ಪರಿಹಾರ ನೀಡಬೇಕು, 2014-15 ನೇ ಸಾಲಿನಲ್ಲಿ ಅತಿವೃಷ್ಠಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು, ಬರದಿಂದ ಹಾನಿಗೊಳಗಾದ ಫಸಲು ಭೀಮಾ ವಿಮಾ ವ್ಯಾಪ್ತಿಗೆ ಒಳಪಟ್ಟಿದ್ದರೆ ವಿಮಾ ಯೋಜನೆಯ ಸೌಲಭ್ಯವನ್ನು ಸಕಾಲದಲ್ಲಿ ರೈತರಿಗೆ ಒದಗಿಸಬೇಕು, ಕಾಫಿ ಬೆಳೆಯ ಬಗ್ಗೆ ಕಾಫಿ ಮಂಡಳಿ ಮತ್ತೆ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಬೇಕು, ರೈತರ ಪಂಪ್ ಸೆಟ್‍ಗಳಿಗೆ ನಿರಂತರ ವಿದ್ಯುತ್ ಕಲ್ಪಿಸಬೇಕು, ಕೊಳವೆ ಬಾವಿ ಕೊರೆಯಲು ರೈತರಿಗೆ ಅವಕಾಶ ನೀಡಬೇಕು, ವ್ಯವಸಾಯಕ್ಕೆ ಪಂಪ್ ಮೂಲಕ ಹೊಳೆಯಿಂದ ನೀರು ತೆಗೆಯಲು ಅಡ್ಡಿಪಡಿಸಬಾರದು, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿರುವ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂದು ಬಿಜೆಪಿ ರೈತ ಮೋರ್ಚಾ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂಗೀರ ಸತೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್, ಸೋಮವಾರಪೇಟೆ ಅಧ್ಯಕ್ಷ ಹೆಚ್.ಎಂ. ಸುಧೀರ್ ಹಾಗೂ ಪ್ರಮುಖ ಬಾಳೆಕಜೆ ಯೋಗೇಂದ್ರ ಉಪಸ್ಥಿತರಿದ್ದರು.