ಮಡಿಕೇರಿ, ಜ. 5: ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನದಿಂದ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತÀಪಡಿಸಿರುವ ಬಹುಜನ ಕಾರ್ಮಿಕರ ಸಂಘ, ಮುಂದಿನ 15 ದಿನಗಳ ಒಳಗೆ ಕಾಮಗಾರಿಯನ್ನು ಆರಂಭಿಸದಿದ್ದಲ್ಲಿ ಸೋಮವಾರಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದೆ.

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ, ಸೋಮವಾರ ಪೇಟೆ ತಾಲೂಕಿನ ವಿವಿಧೆಡೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನದ ಕಾಮಗಾರಿ ಸಮರ್ಪಕವಾಗಿ ನಡೆಯದಿರುವ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಕಾಜೂರು ಗ್ರಾಮದಲ್ಲಿ ರಸ್ತೆಗಾಗಿ ಶಾಸಕರ ನಿಧಿಯಿಂದ ರೂ. 5 ಲಕ್ಷ ಹಾಗೂ ತಾ.ಪಂ. ಅನುದಾನದಿಂದ ರೂ. 2 ಲಕ್ಷ ಮಂಜೂರಾಗಿತ್ತು. ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಸುಮಾರು ರೂ. 1 ಲಕ್ಷ ವೆಚ್ಚದ ಕಾಮಗಾರಿಯನ್ನು ಮಾತ್ರ ಪೂರ್ಣಗೊಳಿಸಿ ಉಳಿದ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ಈ ಹಿಂದೆಯೂ ರಸ್ತೆಯ ಅಭಿವೃದ್ಧಿಗಾಗಿ ಅನೇಕ ಬಾರಿ ಅನುದಾನ ಬಿಡುಗಡೆಯಾಗಿದ್ದರೂ ಯಾವದೇ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲವೆಂದು ಆರೋಪಿಸಿದ ಮುತ್ತಪ್ಪ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳನ್ನೆ ತಪ್ಪಿತಸ್ಥರೆಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸ್ಮಶಾನಕ್ಕಾಗಿ ಜಾಗವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಸ್ಮಶಾನಕ್ಕಾಗಿ ಜಾಗ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರುವ ಶೇ. 25 ರಷ್ಟು ಅನುದಾನ ಸದ್ಬಳಕೆ ಯಾಗುತ್ತಿಲ್ಲವೆಂದು ಆರೋಪಿಸಿದರು.

ಶಾಂತಳ್ಳಿ ಪಂಚಾಯಿತಿಯ ತಲ್ತರೆ ಶೆಟ್ಟಳ್ಳಿ, ಬಸವನಕಟ್ಟೆ ಕಾಲೋನಿ, ತೋಳೂರು ಶೆಟ್ಟಳ್ಳಿಯ ಅಂಬೇಡ್ಕರ್ ನಗರ ವಿಭಾಗದಲ್ಲಿ ಕುಡಿಯುವ ನೀರು ಮತ್ತು ರಸ್ತೆ ಕಾಮಗಾರಿಗಳು ನಡೆದಿಲ್ಲ, ಅಲ್ಲದೆ ಬೀದಿ ದೀಪಗಳಿಲ್ಲ. ಬೆಟ್ಟದಳ್ಳಿ ಪಂಚಾಯಿತಿಯ ಅಂಬೆÉೀಡ್ಕರ್ ನಗರದಲ್ಲಿ ಕೂಡ ಇದೇ ಸಮಸ್ಯೆಯಿದ್ದು, ಹರದೂರು ಗ್ರಾಮ ಪಂಚಾಯಿತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆದಿದೆಯೆಂದು ಮುತ್ತಪ್ಪ ಆರೋಪಿಸಿದರು.

ತಾಲೂಕಿನ ಗ್ರಾಮ ಪಂಚಾಯಿತಿಗÀಳಲ್ಲಿ ಕಾಮಗಾರಿಗಳು ನಡೆಯದೆ ಇರುವದಕ್ಕೆ ಮತ್ತು ಕಳಪೆ ಕಾಮಗಾರಿ ನಡೆದಿರುವದಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯೆ ನೇರ ಹೊಣೆಯೆಂದು ಆರೋಪಿಸಿದ ಹೆಚ್.ಎಸ್. ಮುತ್ತಪ್ಪ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ, ದಕ್ಷ ಅಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಈ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ವಿತರಿಸಬೇಕೆಂದರು. ಗ್ರಾಮೀಣ ಜನರು ಜಿಲ್ಲಾಧಿಕಾರಿಗಳ ಕಚೇರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುಕ್ರವಾರ ಆಗಮಿಸುವದರಿಂದ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಕಚೇರಿಯಲ್ಲಿ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಯಾ ತಾಲೂಕು ಅಧಿಕಾರಿಗಳು ಕೂಡ ಗ್ರಾಮಸ್ಥರು ಬರುವ ಸಂದರ್ಭ ಕಚೇರಿಯಲ್ಲಿ ಲಭ್ಯರಿರಬೇಕೆಂದ ಮುತ್ತಪ್ಪ ಅಧಿಕಾರಿಗಳು ಸಭೆಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.

ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ವಿ. ಸುನಿಲ್ ಕುಮಾರ್, ಉಪಾಧ್ಯಕ್ಷ ಎಸ್. ಪೂವಯ್ಯ ಹಾಗೂ ಪ್ರಮುಖರಾದ ಹೊನ್ನಪ್ಪ ಉಪಸ್ಥಿತರಿದ್ದರು.