ಗುಡ್ಡೆಹೊಸೂರು, ಜು. 9: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯ ನಾಲೆ ದಟ್ಟ ಅರಣ್ಯ ಪ್ರದೇಶವಾಗಿ ಮಾರ್ಪಟ್ಟಿದೆ. ರೈತರ ಜಮೀನಿಗೆ ನೀರು ಹರಿಸಲು ಎಡದಂಡೆ ಮತ್ತು ಬಲದಂಡೆ ಸೇರಿ ಒಟ್ಟು 30 ಕಿ.ಮೀ. ಹಳೆಯ ನಾಲೆ ಇದ್ದು, ಈ ನಾಲೆಯಿಂದ ರಂಗಸಮುದ್ರ, ಹೊಸಪಟ್ಟಣ, ನಂಜರಾಯಪಟ್ಟಣ ಈ ವಿಭಾಗದ ಎಡದಂಡೆಯಾದರೆ, ಬಾಳುಗೊಡು, ಬೆಟ್ಟಗೇರಿ, ಬಸವನಹಳ್ಳಿ, ಈ ಗ್ರಾಮಗಳಿಗೆ ಬಲದಂಡೆ ನಾಲೆಯ ಮೂಲಕ ನೀರು ಪೂರೈಕೆ ಯಾಗುತ್ತಿತ್ತು.
ಇದೀಗ ಒಟ್ಟು 15 ಗ್ರಾಮಗಳನ್ನು ಒಳಗೊಂಡು ಕುಶಾಲನಗರ ಸಮೀಪ ಸುಂದರ ನಗರದವರೆಗೆ ನೀರಾವರಿ ಮಾಡುವ ಉದ್ದೇಶದಿಂದ ಕೋಟ್ಯಾಂತರ ಹಣ ಖರ್ಚು ಮಾಡಿ ಸರಕಾರ ಹೊಸ ನಾಲೆಯ ಕಾಮಗಾರಿ ಯನ್ನು ಪೂರ್ಣಗೊಳಿಸಲಾಯಿತು. ಆದರೆ ಕೋಟ್ಯಾಂತರ ಹಣ ನೀರಿನಲ್ಲಿ ಕೊಚ್ಚಿ ಹೊಯಿತು. ಒಂದು ವರ್ಷವೂ ಸರಿಯಾಗಿ ರೈತರ ಜಮೀನಿಗೆ ನೀರು ಹರಿಸಲು ನೀರಾವರಿ ಇಲಾಖೆಗೆ ಸಾಧ್ಯವಾಗಿಲ್ಲ ಇದಕ್ಕೆ ಕಾವೇರಿ ನೀರಾವರಿ ನಿಗಮ ಕಾರಣವಾಗಿದೆ.
ಪ್ರತೀ ವರ್ಷ ಭತ್ತದ ಕೃಷಿ ಮಾಡುವ ಸಮಯ ಬಂದರೆ ರೈತರ ಗೋಳು ಹೇಳ ತೀರದು. ಸಮಸ್ಯೆಗಳಿಂದಾಗಿ ಹಲವಾರು ರೈತರು ಗದ್ದೆ ಬೇಸಾಯವನ್ನೇ ಬಿಟ್ಟು ತಮ್ಮ ಜಮೀನುಗಳನ್ನು ಪಾಳು ಬಿಟ್ಟಿದ್ದಾರೆ. ಆದರೆ ಬಹಳಷ್ಟು ಮಂದಿ ರೈತರು ಇಂದಿಗೂ ಭತ್ತದ ವ್ಯವಸಾಯವನ್ನು ಬಿಟ್ಟಿಲ್ಲ.
ಸರಿಯಾದ ಸಮಯಕ್ಕೆ ನಾಲೆಗಳನ್ನು ಹೂಳೆತ್ತಿ ನೀರು ಹರಿಯುವಂತೆ ಮಾಡಬೇಕಾಗಿದೆ. ಈ ಸಂಬಂಧ ಕಳೆದ ಬಾರಿ ಅಲ್ಲಿನ ರೈತ ಹೋರಾಟ ಸಮಿತಿ ವತಿಯಿಂದ ಗುಡ್ಡೆಹೊಸೂರಿನಲ್ಲಿ ಪ್ರತಿಭಟನೆ ಮತ್ತು ಕುಶಾಲನಗರ ಕಚೇರಿಯನ್ನು ಮುತ್ತಿಗೆ ಹಾಕಲಾಯಿತು. ಈ ಬಾರಿಯೂ ಮೇ ತಿಂಗಳಿನಲ್ಲಿಯೇ ಇಲಾಖಾ ಹಿರಿಯ ಅಧಿಕಾರಿಗಳನ್ನು ರೈತರು ಭೇಟಿ ಮಾಡಿ ನಾಲೆಯನ್ನು ದುರಸ್ತಿ ಪಡಿಸುವಂತೆ ಕೋರಲಾಗಿತ್ತು. ಆದರೆ ತುರ್ತಾಗಿ ನಡೆಯಬೇಕಾಗಿರುವ ಕಾಮಗಾರಿ ನಡೆಸದೆ ಕಾಟಾಚಾರದ ಕಾಮಗಾರಿ ನಡೆಸಲಾಗುತ್ತಿದೆ.
ಅಲ್ಲದೆ ಈ ಕಾಮಗಾರಿಯು ಕಳಪೆಯಾಗಿರುವದಾಗಿ ರಂಗಸಮುದ್ರ ಗ್ರಾಮದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಕೆ. ಚಂದ್ರ ಆರೋಪಿಸಿದ್ದಾರೆ. ಇಲಾಖಾ ಕಿರಿಯ ಇಂಜಿನಿಯರ್ ಜಗದೀಶ್ ಅವರನ್ನು ನಾಲೆ ದುರಸ್ತಿಪಡಿಸುವ ವಿಚಾರ ಕೇಳಿದರೆ ಎರಡು ವಿಭಾಗಕ್ಕೂ ಒಟ್ಟು ರೂ. 4 ಲಕ್ಷ ಹಣ ಬಿಡುಗಡೆಯಾಗಿದೆ ಈ ಹಣದಲ್ಲಿ ಹೇಗೆ ಕಾಮಗಾರಿ ನಡೆಸುವದು ಎಂಬದಾಗಿ ಉತ್ತರಿಸುತ್ತಾರೆ. ರೈತರು ಭತ್ತದ ಸಸಿ ಮಡಿ ತಯಾರಿಸಲು ನೀರಿಗಾಗಿ ಪರದಾಡುವಂತಾಗಿದೆ. ತಕ್ಷಣದಿಂದಲೇ ನಾಲೆಯೊಳಗಿರುವ ಕಾಡು ಕಡಿದು ರೈತರ ಜಮೀನಿಗೆ ನೀರು ಹರಿಸಲು ಇಲಾಖೆ ತಕ್ಷಣ ಕಾರ್ಯೋನ್ಮುಖ ವಾಗುವಂತೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಎಂ. ಮಣಿ ಕುಮಾರ್, ಸಂಚಾಲಕ ವಿ.ಪಿ. ಶಶಿಧರ್ ಮತ್ತು ಈ ವಿಭಾಗದ ರೈತರು ಒತ್ತಾಯಿಸಿದ್ದಾರೆ.
- ಗಣೇಶ್ ಕೊಡೆಕ್ಕಲ್.