ಕುಶಾಲನಗರ, ಡಿ. 2: ಕುಶಾಲನಗರ ಸಮೀಪದ ಹೊಸಪಟ್ಟಣ ಕಾಫಿ ಬೆಳೆಗಾರ ಶಿವಕುಮಾರ್ ಮನೆಗೆ ನುಗ್ಗಿ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಡಿಕೇರಿಯ ಆಟೋ ಚಾಲಕ ಕೃಷ್ಣ ಎಂಬಾತನನ್ನು ಬಂಧಿಸಿ ದರೋಡೆಗೈದ ಸಂಪೂರ್ಣ ಸ್ವತ್ತನ್ನು ಪೊಲೀಸರು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಸುದ್ದಿಗೋಷ್ಠಿ ಯಲ್ಲಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು 7 ಲಕ್ಷ ನಗದು ಸೇರಿದಂತೆ ಒಟ್ಟು 40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ರಿವಾಲ್ವರ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದ ದಿನ 4 ಮಂದಿ ಆರೋಪಿಗಳನ್ನು ನಂತರ ಓರ್ವ ಆರೋಪಿ ಸೇರಿದಂತೆ ಇದೀಗ ಪ್ರಕರಣದ ರೂವಾರಿ ಕೃಷ್ಣ ಬಂಧನಕ್ಕೆ ಒಳಗಾಗಿದ್ದಾನೆ. 5 ಮಂದಿ ಮಂಗಳೂರಿನ ಉಲ್ಲಾಳದ ನಿವಾಸಿಗಳಾಗಿದ್ದು, ಕೃಷ್ಣ ಮಡಿಕೇರಿಯ ಮಂಗಳಾದೇವಿನಗರದ ಅಂಗನವಾಡಿ ಬಳಿಯ ನಿವಾಸಿಯಾಗಿದ್ದಾರೆ. ಈತ ಆಟೋ ಚಾಲಕನಾಗಿದ್ದು ಈ ಹಿಂದೆ ಮಡಿಕೇರಿಯಲ್ಲಿ ದೇವಿ ಗ್ಯಾಸ್ ಮಾಲೀಕರ ಮನೆ ದರೋಡೆ ಪ್ರಕರಣದಲ್ಲಿ ಪಾಲ್ಗೊಂಡು ಜೈಲು ಸೇರಿದ್ದ ಎಂದು ತಿಳಿಸಿದ್ದಾರೆ.
ಬಾಡಿಗೆ ಆಟೋ ಒಂದರಲ್ಲಿ ಚಾಲಕನಾಗಿರುವ ಕೃಷ್ಣ ತಾನು ಮಾಡಿದ ಕೈಸಾಲ ತೀರಿಸುವ ನಿಟ್ಟಿನಲ್ಲಿ ಮಡಿಕೇರಿಯ ಶರೀಫ್ ಎಂಬಾತ ನೊಂದಿಗೆ ಸೇರಿ ಈ ದರೋಡೆಗೆ ಸಂಚು ರೂಪಿಸಿದ್ದಾನೆ. ಸರ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕುಮಾರ್ ಎಂಬಾತ ಶಿವಕುಮಾರ್ ಮನೆಯ ಬಗ್ಗೆ ಮಾಹಿತಿ ನೀಡಿದ್ದು ಈ ತಿಂಗಳ 22 ರಂದು ಮಡಿಕೇರಿಯಿಂದ ನಿಜಾಮ್ ಎಂಬಾತನೊಂದಿಗೆ ಮಂಗಳೂರಿನ ಕೆಲವರನ್ನು ಸೇರಿಸಿ ಈ ಕೃತ್ಯ ಎಸಗಿರುವದಾಗಿ ತಿಳಿಸಿದ್ದಾನೆ. ನಿಜಾಮ್, ಶರೀಫ್, ಕೃಷ್ಣ ಇವರುಗಳು ದರೋಡೆ ಸ್ಕೆಚ್ ರೂಪಿಸಿ ಮಂಗಳೂರಿನಿಂದ ಇನ್ನೋವ ಕಾರೊಂದರಲ್ಲಿ ಉಳಿದ ಆರೋಪಿ ಗಳನ್ನು ಸೇರಿಸಿ
(ಮೊದಲ ಪುಟದಿಂದ) ಕುಶಾಲನಗರದಲ್ಲಿ 23 ರಂದು ರಾತ್ರಿ ಇಂದಿರಾ ಬಡಾವಣೆಯ ಮನೆ ಯೊಂದರಲ್ಲಿ ತಂಗಿರುವದಾಗಿ ಆರೋಪಿಗಳು ಮಾಹಿತಿ ನೀಡಿದ್ದಾರೆ.
ಈ ಮನೆ ಶರೀಫ್ ಸಹೋದರಿಯ ಮನೆಯಾಗಿದ್ದು ಸಹೋದರಿ ಇಲ್ಲದ ಸಂದರ್ಭ ಮನೆಯನ್ನು ದುರ್ಬಳಕೆ ಮಾಡಲಾಗಿದೆ ಎಂದು ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ನೋಂದಣಿಯುಳ್ಳ ಇನ್ನೋವ ಕಾರನ್ನು ಮಹಾರಾಷ್ಟ ನೋಂದಣಿಯ ನಕಲಿ ನಂಬರ್ ಪ್ಲೇಟ್ ಅಳವಡಿಸಿ ನಂತರ ಶಿವಕುಮಾರ್ ಮನೆ ಬಳಿ ಹೊಂಚು ಹಾಕಿ ಈ ಕೃತ್ಯ ಎಸಗಿರುವದಾಗಿ ಆರೋಪಿಗಳು ಒಪ್ಪಿದ್ದಾರೆ. ನಂತರ ಸಾರ್ವಜನಿಕರ ಸಹಕಾರದಿಂದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಜಲಾಲ್ ಎಂಬ ಆರೋಪಿ ಸಿದ್ದಾಪುರ ಬಳಿ ಮಸೀದಿಯೊಂದಕ್ಕೆ ತೆರಳಿದ ಸಂದರ್ಭ ಪತ್ತೆಯಾಗಿರುವದಾಗಿ ರಾಜೇಂದ್ರ ಪ್ರಸಾದ್ ತಿಳಿಸಿದ್ದು, ಇನ್ನುಳಿದಂತೆ 3 ಮಂದಿ ಆರೋಪಿಗಳ ಪತ್ತೆಗೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ಪತ್ತೆಹಚ್ಚಿರುವದಾಗಿ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಅಬ್ದುಲ್ ರೆಹಮಾನ್, ಉಲ್ಲಾಳದ ಮಹಮ್ಮದ್ ಹನೀಫ್, ಮಹಮ್ಮದ್ ಫಯಾಜ್, ಜಲಾಲ್, ಹಂಪನಕಟ್ಟೆಯ ಜಾಫರ್ ಸಾದಿಕ್ ಮತ್ತು ಮಡಿಕೇರಿಯ ಕೃಷ್ಣ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿಗಳು: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಕುಶಾಲನಗರ ಡಿವೈಎಸ್ಪಿ ಸಂಪತ್‍ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಜಿಲ್ಲಾ ಅಪರಾಧ ಪತ್ತೆದಳದ ಮಹೇಶ್, ಠಾಣಾಧಿಕಾರಿ ಗಳಾದ ಜೆ.ಇ. ಮಹೇಶ್, ಅನೂಪ್ ಮಾದಪ್ಪ, ಜಗದೀಶ್, ಸಿಬ್ಬಂದಿಗಳಾದ ಸಜಿ, ಲೋಕೇಶ್, ಉದಯ, ಮೋಹನ್, ಸುರೇಶ್, ಜಯಪ್ರಕಾಶ್, ನಾಗರಾಜ್, ಸಂಪತ್ ಇದ್ದರು.
ಶ್ಲಾಘನೆ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರ ತಂಡಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 20 ಸಾವಿರ ರೂಗಳ ಬಹುಮಾನ ಘೋಷಿಸಿ ಅಧಿಕಾರಿ, ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭ ಆರೋಪಿಗಳ ಕಾರ್ಯಾಚರಣೆಯಲ್ಲಿ ಸಹಕರಿಸಿದ ಸಾರ್ವಜನಿಕರನ್ನು ಅಭಿನಂದಿಸಿದ್ದಾರೆ.