ಮಡಿಕೇರಿ, ಜ. 13: ಮಡಿಕೇರಿ ತಾಲೂಕಿನ ಚೆಂಬು ಸರಕಾರಿ ಪ್ರೌಢ ಶಾಲೆ 2015-2016 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 99 ರಷ್ಟು ಫಲಿತಾಂಶ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಇದಕ್ಕೆ ಕಾರಣಕರ್ತರಾದ ಶಿಕ್ಷಕರುಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಶಾಲಾ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ವಿ. ದೇವದಾಸ್ ವಿದ್ಯಾರ್ಥಿಗಳು ಶೈಕ್ಷಣಿಕ ಗುರಿ ಹೊಂದಿದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಮುಖ್ಯ ಭಾಷಣಾಕಾರರಾಗಿ ಮಾತನಾಡಿದ ಸಹಾಯಕ ಇಂಜಿನಿಯರ್ ಸಿ. ಸೋಮಶೇಖರ್ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವ ಮೂಲಕ ಶಿಕ್ಷಕ ವೃಂದಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ಇಂದು ಸರಕಾರಿ ಶಾಲೆಗಳು ಕೂಡ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಕರ ಪರಿಶ್ರಮವನ್ನು ಗುರುತಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಶಾಲೆಯ ಹಿಂದಿ ಶಿಕ್ಷಕಿ ಪಿ.ಎಸ್. ಕಾಮಾಕ್ಷಿ ಮಾತನಾಡಿದರು. ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ದಾನಿಗಳು ಮತ್ತು ಸಮಾಜ ಸೇವಕ ಕಡಗದಾಳುವಿನ ಟಿ.ಆರ್. ವಾಸುದೇವ, ಚೆಂಬು ಗ್ರಾ.ಪಂ. ಅಧ್ಯಕ್ಷ ಪಿ.ಕೆ. ಮಾಧವ ಹಾಗೂ ಎಸ್‍ಡಿಎಂಸಿ ಅಧ್ಯಕ್ಷೆ ಕೆ.ಎಸ್. ಶಶಿಕಲಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ದೇಜಮ್ಮ ಸ್ವಾಗತಿಸಿದರೆ, ಶಿಕ್ಷಕಿ ವಿ.ಮಮತ ವಂದಿಸಿದರು.

ಸನ್ಮಾನಿಸಲ್ಪಟ್ಟ ಶಿಕ್ಷಕರುಗಳು

ಮುಖ್ಯ ಶಿಕ್ಷಕಿ ದೇಚಮ್ಮ, ಕೆ. ಜ್ಯೋತಿ ಶೆಟ್ಟಿ, ವಿ. ಮಮತ, ಡಿ. ಸರಿತ, ಪಿ.ಎಸ್. ಕಾಮಾಕ್ಷಿ, ಹೇಮಲತಾ, ನಂದ ಪೋಳ್ ಹಾಗೂ ಕೆ.ಬಿ .ಕಮಲ.