ಮಡಿಕೇರಿ, ಅ. 8: ಗೋಣಿಕೊಪ್ಪಲು ಹಾಗೂ ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾ ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಾ. 11 ರ ಸಂಜೆ 4 ಗಂಟೆಯಿಂದ ತಾ. 12 ರ ಬೆಳಿಗ್ಗೆ 8 ಗಂಟೆಯವರೆಗೆ ಗೋಣಿಕೊಪ್ಪಲು ಹಾಗೂ ತಾ. 11 ರ ಸಂಜೆ 4 ಗಂಟೆಯಿಂದ ತಾ. 12 ರ ಮಧ್ಯಾಹ್ನ 12 ಗಂಟೆಯವರೆಗೆ ಮಡಿಕೇರಿ ನಗರದಲ್ಲಿ ವಾಹನಗಳ ಸಂಚಾರದಲ್ಲಿ ಬದಲಿ ವ್ಯವಸ್ಥೆಯನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಆದೇಶ ಹೊರಡಿಸಿದ್ದಾರೆ.
ಮಡಿಕೇರಿ ನಗರದಲ್ಲಿ ವಾಹನ ಸಂಚಾರಗಳ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆಯ ವಿವರ ಇಂತಿದೆ. ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮತ್ತು ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆಕಟ್ಟೆ ಕಡೆಯಿಂದ ಎ.ವಿ. ಸ್ಕೂಲ್, ಮುತ್ತಪ್ಪ ದೇವಸ್ಥಾನ, ಮುಂದೆ ಸೈಂಟ್ ಜೋಸೆಫ್ ಕಾನ್ವೆಂಟ್, ಎಸ್.ಪಿ. ಕಚೇರಿ ಜಂಕ್ಷನ್, ಮುಂದೆ ಐ.ಟಿ.ಐ. ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ. ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವದು.
ಸಿದ್ದಾಪುರ, ಮೂರ್ನಾಡು ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಆರ್.ಎಂ.ಸಿ. ಯಾರ್ಡ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ. ಗಾಳಿಬೀಡು, ಅಬ್ಬಿಪಾಲ್ಸ್, ಸೋಮವಾರಪೇಟೆ ಹಾಗೂ ಕಾಲೂರು ಕಡೆಗಳಿಂದ ಬರುವ ವಾಹನಗಳಿಗೆ ಎಫ್.ಎಂ.ಸಿ. ಕಾಲೇಜು ಮೈದಾನ, ಮತ್ತು ಸೈಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ನಿಲುಗಡೆಗೆ ವ್ಯವಸ್ಥೆ.
ಮೈಸೂರು, ಸಿದ್ದಾಪುರ, ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಅಂಡ್ ಹೊಟೇಲಿನ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ವ್ಯವಸ್ಥೆ.
ವೀರಾಜಪೇಟೆ ಕಡೆಯಿಂದ ಬರುವ ವಾಹನಗಳ ನಿಲುಗಡೆಗೆ ಮೂರ್ನಾಡು ರಸ್ತೆಯ ಸರ್ಕಾರಿ ಆಸ್ಪತ್ರೆಯ ಪಂಪ್ಹೌಸ್ ಬಳಿ ಚಿಕ್ಕ ಮೈದಾನದಲ್ಲಿ ನಿಗದಿತ ವಾಹನಗಳಿಗೆ ಅನುಕೂಲವಾಗುವಷ್ಟು ನಿಲುಗಡೆಗೆ ವ್ಯವಸ್ಥೆ. ನಂತರ ಉಳಿದ ವಾಹನಗಳು ಜಿ.ಟಿ. ವೃತ್ತದ ಕಡೆಯಿಂದ ಆರ್.ಎಂ.ಸಿ. ಯಾರ್ಡ್ಗೆ ತೆರಳಿ ನಿಲುಗಡೆ ಮಾಡುವದು.
ಏಕಮುಖ ಸಂಚಾರ ವ್ಯವಸ್ಥೆ: ಮೈಸೂರು, ಸೋಮವಾರಪೇಟೆ ಕಡೆಗಳಿಂದ ಬರುವ ವಾಹನಗಳು ಚೈನ್ಗೇಟ್ ಕಡೆಯಿಂದ ಮ್ಯಾನ್ಸ್ ಕಾಂಪೌಂಡು ಮತ್ತು ಜೂನಿಯರ್ ಕಾಲೇಜು ಮೈದಾನಕ್ಕೆ ಪ್ರವೇಶಿಸುವ ದಾರಿಯಲ್ಲಿ ತಾತ್ಕಾಲಿಕ ಏಕಮುಖ ಸಂಚಾರ ಮಾಡುವದು.
ಜೂನಿಯರ್ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸಿದ ವಾಹನಗಳು ವಾಪಸ್ಸು ಮೈಸೂರು ರಸ್ತೆಗೆ ಹೋಗುವಾಗ ಗೌಡ ಸಮಾಜ, ರಾಘವೇಂದ್ರ ದೇವಸ್ಥಾನ ಕಡೆಯಿಂದ ಚೈನ್ಗೇಟ್ಗಾಗಿ ಹೋಗುವಂತೆ ತಾತ್ಕಾಲಿಕ ಏಕಮುಖ ಸಂಚಾರ ಮಾಡುವದು.
ಮಡಿಕೇರಿ ನಗರದೊಳಗೆ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾದ ಬಗ್ಗೆ ವಿವರ. ಮಡಿಕೇರಿ ನಗರದ ಜಿ.ಟಿ. ವೃತ್ತದಿಂದ ಎಂ.ಎಂ. ಸರ್ಕಲ್, ಗಾಂಧಿ ಮಂಟಪ, ರಾಜಾಸೀಟ್, ರಾಡ್ರಿಗಾಸ್ ಬಿಲ್ಡಿಂಗ್ ಜಂಕ್ಷನ್ ಮತ್ತು ವೆಬ್ಸ್, ಹಾಕಿ ಸ್ಟೇಡಿಯಂವರೆಗೆ. ಮಡಿಕೇರಿ ನಗರದ ಜಿ.ಟಿ. ವೃತ್ತದಿಂದ ಗೌಳಿಬೀದಿ ರಸ್ತೆಗಳಲ್ಲಿ ಮತ್ತು ಮೋಣಪ್ಪ ಗ್ಯಾರೇಜ್, ಎಸ್.ಬಿ.ಐ. ಜಂಕ್ಷನ್, ಶಕ್ತಿ ಪ್ರೆಸ್ ರಸ್ತೆ, ಹೊಟೇಲ್ ರಾಜ್ವರೆಗೆ.
ಮಡಿಕೇರಿ ನಗರದ ಜಿ.ಟಿ. ರಸ್ತೆ, ಎಂ.ಎಂ. ವೃತ್ತಕ್ಕಾಗಿ ಓಂಕಾರೇಶ್ವರ ದೇವಸ್ಥಾನ ರಸ್ತೆ, ಜೂನಿಯರ್ ಕಾಲೇಜುಗಾಗಿ ಬಸ್ ನಿಲ್ದಾಣದ ಕಡೆಗೆ.
ಮಡಿಕೇರಿ ನಗರದ ಜಿ.ಟಿ. ವೃತ್ತದಿಂದ ಎಂ.ಎಂ. ವೃತ್ತಕ್ಕಾಗಿ ಖಾಸಗಿ ಬಸ್ ನಿಲ್ದಾಣ, ಜೂನಿಯರ್ ಕಾಲೇಜು ರಸ್ತೆ, ಖಾಸಗಿ ಬಸ್ ನಿಲ್ದಾಣದಿಂದ ಐ.ಜಿ. ಸರ್ಕಲ್, ಗಣಪತಿ ಬೀದಿ ಪೂರ್ಣ, ಮಹದೇವಪೇಟೆ ರಸ್ತೆಗಾಗಿ ಎ.ವಿ. ಶಾಲೆಯವರೆಗೆ, ಮತ್ತು ಐ.ಜಿ. ಸರ್ಕಲ್ನಿಂದ ಕಾಲೇಜು ರಸ್ತೆ, ಎಸ್.ಬಿ.ಐ. ಜಂಕ್ಷನ್, ಮಾರ್ಕೆಟ್ ರಸ್ತೆ, ಖಾಸಗಿ ಬಸ್ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮೋಣಪ್ಪ ಗ್ಯಾರೇಜ್ವರೆಗೆ ಮತ್ತು ಇದಲ್ಲದೆ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಗಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ಪೂರ್ಣವಾಗಿ ನಿಷೇಧಿಸಿದೆ.
ಜಿ.ಟಿ. ವೃತ್ತದಿಂದ ಕೆ.ಎಸ್.ಆರ್.ಟಿ.ಸಿ. ಡಿಪೋ ಕಡೆಗೆ ರಸ್ತೆಯ ಉಭಯ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ. ತಾ. 11 ಮತ್ತು 12 ರಂದು ಕುಂದುರುಮೊಟ್ಟೆ ದೇವಸ್ಥಾನದಿಂದ ಗಾಂಧಿ ಮಂಟಪ ಹಾಗೂ ಎಂ.ಎಂ. ವೃತ್ತದವರೆಗೆ, ಜಿ.ಟಿ. ವೃತ್ತದಿಂದ ಖಾಸಗಿ ಬಸ್ ನಿಲ್ದಾಣ, ಇಂದಿರಾ ವೃತ್ತ, ಕಾಲೇಜು ರಸ್ತೆ ಎಸ್.ಬಿ.ಐ. ಜಂಕ್ಷನ್, ಗಣಪತಿ ಬೀದಿ, ಮಹದೇವಪೇಟೆ ಈ ಮೇಲ್ಕಂಡ ರಸ್ತೆ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ.
ತಾ. 11 ರಂದು ಸಂಜೆ 4 ಗಂಟೆಯ ನಂತರ ಮಡಿಕೇರಿ ನಗರದೊಳಗೆ ಜನ ಸಂದಣಿ ಅಧಿಕವಾಗಿರುವದರಿಂದ ಎಲ್ಲಾ ಮಾದರಿಯ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗುವದು. ತಾ. 12 ರಂದು ಮಧ್ಯಾಹ್ನ 12 ಗಂಟೆಯವರೆಗೆ ನಗರದೊಳಗೆ ಮಂಟಪಗಳು ಸಂಚರಿಸುವ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದೆ.
ಮಂಗಳೂರು ರಸ್ತೆಯ ದೊಡ್ಡ ತಿರುವಿನಿಂದ ಕೆಳಗಡೆಗೆ ಮತ್ತು ಮೂರ್ನಾಡು ರಸ್ತೆ ಪಂಪ್ ಹೌಸ್ನಿಂದ ಕೆಳಗಡೆಗೆ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ. ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ಮತ್ತು ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಜಿ.ಟಿ.ವೃತ್ತದ ಮುಖಾಂತರ ಎಲ್ಲಾ ವಾಹನಗಳಿಗೆ ಸಂಚಾರ ವ್ಯವಸ್ಥೆ ಮಾಮೂಲಿನಂತಿರುತ್ತದೆ. ಜಿ.ಟಿ. ವೃತ್ತದ ಬಳಿ ಬರುವ ಎಲ್ಲಾ ಮಂಟಪಗಳು ಜಿ.ಟಿ. ವೃತ್ತದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿಯಿಂದ ತಿರುಗಿ ಹೋಗುವದು.
ದಸರಾ ಜನೋತ್ಸವ ಕಾರ್ಯಕ್ರಮದ ಸಂಬಂಧ ನಗರದ ಮಹದೇವಪೇಟೆ ಮತ್ತು ಗಣಪತಿ ಬೀದಿ ನಿವಾಸಿಗಳು ತಾ. 11 ರಿಂದ ತಾ. 12 ರ ಸಂಜೆ 6 ಗಂಟೆಯವರೆಗೆ ತಮ್ಮ ವಾಹನಗಳನ್ನು ಮಹದೇವಪೇಟೆಯಲ್ಲಿರುವ ಎಲ್.ಜಿ. ಕ್ರೆಸೆಂಟ್ ಶಾಲೆಯ ಆವರಣದಲ್ಲಿ ಮತ್ತು ಕನಕದಾಸ ರಸ್ತೆಯ ನಗರಸಭೆ ಹಿಂದೂಸ್ಥಾನಿ ಶಾಲೆಯ ಆವರಣದಲ್ಲಿ ನಿಲುಗಡೆ ಮಾಡಬೇಕು.
ಈ ಎಲ್ಲಾ ನಿಯಮ ಉಲ್ಲಂಘಿಸಿ ನಿಷೇಧಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಗೊಳಿಸಿದ್ದಲ್ಲಿ ಅಥವಾ ಸಂಚರಿಸುತ್ತಿದ್ದಲ್ಲಿ ಅಂತಹ ವಾಹನಗಳ ವಿರುದ್ದ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.
ಗೋಣಿಕೊಪ್ಪ: ಗೋಣಿಕೊಪ್ಪಲು ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದವರೆಗೆ ಪೊನ್ನಂಪೇಟೆ ರಸ್ತೆ ಜಂಕ್ಷನ್ನಿಂದ ಕೆ.ಪಿ.ಟಿ.ಸಿ.ಎಲ್. ಕಚೇರಿಯವರೆಗೆ, ಪಾಲಿಬೆಟ್ಟ ರಸ್ತೆಯಲ್ಲಿ ಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ ರಸ್ತೆಯವರೆಗೆ ಮುಖ್ಯ ಬೀದಿಯಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.
ಮೈಸೂರಿನಿಂದ ತಿತಿಮತಿ, ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆಗೆ ಬರುವ ವಾಹನಗಳಿಗೆ ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಗೆ ಹೋಗಲು ಬದಲಿ ಮಾರ್ಗದ ವ್ಯವಸ್ಥೆ. ವೀರಾಜಪೇಟೆಯಿಂದ ಗೋಣಿಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳಿಗೆ ಕೈಕೇರಿ ಗ್ರಾಮದ ಕಳತ್ಮಾಡ್-ಅತ್ತೂರು ಶಾಲೆ ಜಂಕ್ಷನ್-ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ಬದಲಿ ಮಾರ್ಗದ ವ್ಯವಸ್ಥೆ. ಕೇರಳದಿಂದ ಪೆರುಂಬಾಡಿ-ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳಿಗೆ ಪೆರುಂಬಾಡಿ-ವೀರಾಜಪೇಟೆ-ಸಿದ್ದಾಪುರ-ಪಿರಿಯಾಪಟ್ಟಣ-ಮೈಸೂರು ಕಡೆಗೆ ಬದಲಿ ಮಾರ್ಗದ ವ್ಯವಸ್ಥೆ. ವೀರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಕಾನೂನು-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು ವೀರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವದು.
ಬಾಳಲೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆಗೆ ಹೋಗುವ ವಾಹನಗಳು ಬಾಳಲೆ-ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವೀರಾಜಪೇಟೆಗೆ ಸಂಚರಿಸುವದು. ಕುಟ್ಟ, ಶ್ರೀಮಂಗಲ, ಕಾನೂರು ಕಡೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆಗೆ ಹೋಗುವ ವಾಹನಗಳು ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವೀರಾಜಪೇಟೆಗೆ ಸಂಚರಿಸುವದು.
ಮೈಸೂರು-ತಿತಿಮತಿ-ಗೋಣಿಕೊಪ್ಪ-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು ತಿತಿಮತಿ-ಕೋಣನಕಟ್ಟೆ-ಪೊನ್ನಪ್ಪಸಂತೆ-ನಲ್ಲೂರು-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವದು. ಕುಟ್ಟ-ಶ್ರೀಮಂಗಲ-ಪೊನ್ನಂಪೇಟೆ-ಗೋಣಿಕೊಪ್ಪ-ಮೈಸೂರು ಕಡೆಗೆ ಹೋಗುವ ವಾಹನಗಳು, ಕುಟ್ಟ-ಶ್ರೀಮಂಗಲ-ಪೊನ್ನಂಪೇಟೆ-ನಲ್ಲೂರು-ಪೊನ್ನಪ್ಪಸಂತೆ-ಕೋಣನಕಟ್ಟೆ-ತಿತಿಮತಿ ಮಾರ್ಗವಾಗಿ ಸಂಚರಿಸುವದು. ವೀರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಬಾಳಲೆ ಕಡೆಗೆ ಹೋಗುವ ವಾಹನಗಳಿಗೆ ವೀರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವದು.
ದಸರಾ ವೀಕ್ಷಣೆಗೆ ಗೋಣಿಕೊಪ್ಪಕ್ಕೆ ವೀರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ ಕಾವೇರಿ ಕಾಲೇಜು ಮೈದಾನದಲ್ಲಿ, ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯಲ್ಲಿರುವ ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ ಬದಿಯಲ್ಲಿ, ತಿತಿಮತಿ ಮತ್ತು ಬಾಳೆಲೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪಲು ಆರ್.ಎಂ.ಸಿ. ಆವರಣದಲ್ಲೂ ಹಾಗೂ ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳಿಗೆ ಪಾಲಿಬೆಟ್ಟ ರಸ್ತೆಯಲ್ಲಿ ಶಾಸ್ತಾ ಇಂಡಸ್ಟ್ರೀಸ್ನಿಂದ ಅತ್ತೂರು ಕಡೆಗೆ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.