ಸಿದ್ದಾಪುರ, ಜ. 8: ಮಾಲ್ದಾರೆಯ ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಸಂಬಂಧಿಸಿ ಕೆಲಕಾಲ ಗೊಂದಲ ಉಂಟಾಗಿ ಬಳಿಕ ತಿಳಿಗೊಂಡಿತ್ತು.

ಮಾಲ್ದಾರೆಯ ದಿಡ್ಡಳ್ಳಿಯಲ್ಲಿ ಕಳೆದ 6 ತಿಂಗಳಿನಿಂದ ವಾಸಮಾಡಿಕೊಂಡಿದ್ದ ಯರವರ ನಂಜ (45) ಎಂಬಾತನು ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದನು. ಡಿ. 7 ರಂದು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿ ಗುಡಿಸಲುಗಳನ್ನು ತೆರವುಗೊಳಿಸಿದ್ದರು. ಗುಡಿಸಲು ತೆರವುಗೊಳಿಸಿದ ನಂತರ ದಿಡ್ಡಳ್ಳಿ ಆಶ್ರಮ ಶಾಲೆಯ ಎದುರಿನಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿ ವಾಸವಿದ್ದ ನಂಜ ಇಂದು ಬೆಳಿಗ್ಗೆ 6.30ರ ಸಮಯ ನಿದ್ರೆಯಿಂದ ಎದ್ದು ಮುಖ ತೊಳೆಯಲು ಮುಂದಾದಾಗ ತೀವ್ರ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಆತನ ಸಂಬಂಧಿಕರು ಆತನನ್ನು ಹಿಡಿದು ಕೂರಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಜೀಪಿನಲ್ಲಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಬಳಿಕ ಆತನ ಪತ್ನಿ ಹಾಗೂ ಮಕ್ಕಳು ವಾಸಮಾಡಿಕೊಂಡಿರುವ ತೂಚಮಕೇರಿಯ ಕಾಫಿ ಬೆಳೆಗಾರರ ಧರ್ಮಜ ಅವರಿಗೆ ಮಾಹಿತಿ ನೀಡಿದ ಬಳಿಕ ಪತ್ನಿ, ಮಕ್ಕಳು ಸಿದ್ದಾಪುರಕ್ಕೆ ಆಗಮಿಸಿದರು.

ಕೆಲಕಾಲ ಗೊಂದಲ: ದಿಡ್ಡಳ್ಳಿಯ ನಿರಾಶ್ರಿತರ ಶಿಬಿರದಲ್ಲಿ ನಂಜ ಆಕಸ್ಮಿಕವಾಗಿ ಮೃತಪಟ್ಟ ವಿಚಾರ ಸಂಬಂಧಿಸಿದಂತೆ ಕೆಲವು ಗಾಳಿ ಸುದ್ದಿಗಳು ಹರಿದಾಡಿತ್ತು. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. ಅಲ್ಲದೇ ಸ್ವತಃ ಎಸ್.ಪಿ. ಮುತ್ತುರಾಜ್ ಮುತುವರ್ಜಿ ವಹಿಸಿ ಕುಟುಂಬಸ್ಥರಿಂದ ಹಾಗೂ ಮೃತ ನಂಜನ ಪತ್ನಿ, ಮಕ್ಕಳಿಂದ ಮಾಹಿತಿ ಕಲೆ ಹಾಕಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪ್ರಬಾರ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಅವರು ಕುಟುಂಬದ ಹೇಳಿಕೆಯ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವದೆಂದು ಸ್ಪಷ್ಟಪಡಿಸಿದರು.

ಮೃತ ನಂಜನ ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು. ಮೃತ ದೇಹವನ್ನು ಮೃತರ ಕುಟುಂಬದವರ ಒಪ್ಪಿಗೆಯಂತೆ ತೂಚಮಕೇರಿಗೆ ಕೊಂಡೊಯ್ಯಲಾಯಿತು.

ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿವೈಎಸ್‍ಪಿ ಛಬ್ಬಿ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಮಹದೇವಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿ ಪ್ರಕಾಶ್, ತಾಲೂಕು ವಿಸ್ತರಣಾಧಿಕಾರಿ ನವೀನ್, ಚಂದ್ರಶೇಖರ್, ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ, ಗ್ರಾಮ ಲೆಕ್ಕಿಗ ಮಂಜುನಾಥ, ಕಂದಾಯ ಅಧಿಕಾರಿ ಶ್ರೀನಿವಾಸ, ಸಿದ್ದಾಪುರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಹಾಗೂ ವಿವಿಧ ಠಾಣೆಯ ಠಾಣಾಧಿಕಾರಿಗಳು ಇದ್ದರು.

ಕಂದಾಯ ಇಲಾಖೆಯ ವತಿಯಿಂದ ಮೃತ ನಂಜನ ಅಂತ್ಯಕ್ರಿಯೆಗೆ ರೂ. 5 ಸಾವಿರ ಪರಿಹಾರ ಧನವನ್ನು ತಹಶೀಲ್ದಾರ್ ಮಹದೇವಸ್ವಾಮಿ ಕುಟುಂಬಕ್ಕೆ ನೀಡಿದರು.