ಮಡಿಕೇರಿ, ಡಿ. 22: ವಸತಿ ಹಾಗೂ ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟಿಸುತ್ತಿರುವ ದಿಡ್ಡಳ್ಳಿಗೆ ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಕೆ. ಸೋಮಶೇಖರ್ ಭೇಟಿ ನೀಡಿ ಗಿರಿಜನರ ಅಹವಾಲು ಆಲಿಸಿದರು.

50 ರಗ್ಗು ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದ ಅಧ್ಯಕ್ಷರು ನಿವೇಶನ ಹಾಗೂ ವಸತಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವದು. ಸದ್ಯ ನಿರಾಶ್ರಿತರಿಗೆ ಊಟ, ಕುಡಿಯುವ ನೀರು, ಶೌಚಾಲಯ ಒದಗಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಕೈಗೊಳ್ಳಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಸಹಕರಿಸುವವಂತೆ ಕೋರಿದರು.

ದಿಡ್ಡಳ್ಳಿ ಗಿರಿಜನರ ಸ್ಥಿತಿ ತುಂಬಾ ಶೋಚನೀಯವಾಗಿದೆ. ಗಿರಿಜನರ ಪರಿಸ್ಥಿತಿಯನ್ನು ನೋಡಿದರೆ ನೋವಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವದು. ಜಿಲ್ಲೆಯ ವಿವಿಧ ಭಾಗಗಳ ಲೈನ್‍ಮನೆಗಳಲ್ಲಿ ವಾಸ ಮಾಡುತ್ತಿರುವ ಎಲ್ಲಾ ಗಿರಿಜನರಿಗೂ ಮೂಲ ಸೌಲಭ್ಯ ಕಲ್ಪಿಸುವದು ಪ್ರಥಮ ಆದ್ಯತೆಯಾಗಬೇಕು ಎಂದು ತಿಳಿಸಿದರು.

ಅನಾದಿಕಾಲದಿಂದಲೂ ವಾಸ ಮಾಡುತ್ತಿದ್ದ ದಿಡ್ಡಳ್ಳಿಯಲ್ಲಿಯೇ ನಿವೇಶನ ಹಾಗೂ ವಸತಿ ಕಲ್ಪಿಸಬೇಕು. ಈ ಹಿಂದೆ ಲೈನ್‍ಮನೆಗಳಲ್ಲಿ ವಾಸ ಮಾಡುತ್ತಿದ್ದೇವು. ಅಜ್ಜಂದಿರು ವಾಸ ಮಾಡುತ್ತಿದ್ದ ಸ್ಥಳದಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದೆವು. ಈ ಟೆಂಟ್‍ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಏಕಾಏಕಿ ಜೆಸಿಬಿ ತಂದು ತೆರವುಗೊಳಿಸಿದ್ದಾರೆ ಎಂದು ಗಿರಿಜನರು ಅವಲತ್ತುಕೊಂಡರು.

ಜಿಲ್ಲೆಯಲ್ಲಿ 4 ಸಾವಿರ ಕುಟುಂಬಗಳು ನಿವೇಶನ ಹಾಗೂ ವಸತಿ ಸೌಲಭ್ಯವಿಲ್ಲದೆ ನಿರ್ಗತಿಕರಾಗಿ ಬದುಕು ನಡೆಸುತ್ತಿವೆ. ಇದರಿಂದ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನೂ ಮುಂದಾದರೂ ಸರ್ಕಾರದ ಸೌಲಭ್ಯ ಪಡೆಯಬೇಕೆಂಬುದು ಆಶಯವಾಗಿದೆ. ದಿಡ್ಡಳ್ಳಿ ಭಾಗದಲ್ಲಿಯೇ ರಸ್ತೆ ಸಂಪರ್ಕ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ವಸತಿ ಶಾಲೆ ಇದೆ. ದಿಡ್ಡಳ್ಳಿಯಲ್ಲಯೇ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.