ಸೋಮವಾರಪೇಟೆ, ಆ. 18: ಕಳೆದ ಒಂದು ತಿಂಗಳಿನಿಂದ ಇಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ಸನ್ನಿಧಿಯಲ್ಲಿ ಆಷಾಡ ಮಾಸದ ಪ್ರಯುಕ್ತ ಏರ್ಪಡಿಸಿದ್ದ 14ನೇ ವರ್ಷದ ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನಗೊಂಡಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಮೇಲ್‍ಶಾಂತಿ ಮಣಿಕಂಠನ್ ನಂಬೂದರಿ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮದೊಂದಿಗೆ ಪೂಜಾ ಕಾರ್ಯಗಳು ಆರಂಭವಾಯಿತು. ನಂತರ ಪರಿವಾರ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಷಾಡ ಮಾಸದ ಕೊನೆಯ ಪೂಜೆಗೆ ಭುವನೇಶ್ವರಿ ದೇವಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪೂರ್ಣಾಹುತಿಯೊಂದಿಗೆ ಹೋಮ ಕಾರ್ಯವು ಮುಕ್ತಾಯಗೊಂಡಿತು. ಮಹಾಮಂಗಳಾರತಿಯ ನಂತರ ಭಕ್ತಾದಿಗಳಿಗೆ ಅನ್ನದಾನ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು. ಪೂಜಾ ಕಾರ್ಯದಲ್ಲಿ ಯಡವನಾಡು ಶಿವಬಸವೇಶ್ವರ ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪ, ಕುಶಾಲನಗರದ ಕನ್ನಿಕಾ ಪರಮೇಶ್ವರಿ ದೇವಾಲಯದ ಅರ್ಚಕ ಪರಮೇಶ್ವರ ಭಟ್ಟರು, ಚೌಡೇಶ್ವರಿ ದೇವಾಲಯದ ಪ್ರಸನ್ನ ಭಟ್ಟರು, ಕೋಲಾರದ ಶ್ರೀರಂಗಾಚಾರ್ಲು, ಸುಳ್ಯದ ಮಂಜುನಾಥ ಉಡುಪ, ಬಜೆಗುಂಡಿಯ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಜಯಂತ್, ಚಂದ್ರಹಾಸ ಭಟ್ ಮತ್ತಿತರರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಸತತ ಒಂದು ತಿಂಗಳಿನಿಂದ ಜರುಗಿದ ಪೂಜಾ ಕಾರ್ಯಗಳ ಉಸ್ತುವಾರಿಯನ್ನು ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಮುತ್ತಪ್ಪ ಸ್ವಾಮಿ ದೇವಾಲಯದ ಅಧ್ಯಕ್ಷ ಎನ್.ಜಿ. ಜನಾರ್ಧನ್, ಕಾರ್ಯದರ್ಶಿ ರಾಧಾಕೃಷ್ಣ, ಗೌರವಾಧ್ಯಕ್ಷ ವೇಲಾಯುಧನ್, ಖಜಾಂಚಿ ಟಿ.ಸಿ. ಅಶೋಕ್ ಮತ್ತು ನಿರ್ದೇಶಕರು ವಹಿಸಿಕೊಂಡಿದ್ದರು.