ಸೋಮವಾರಪೇಟೆ, ಜೂ. 9: ಕೊಡಗಿನಲ್ಲಿ ಇದೀಗ ದೇವಟ್ ಪರಂಬು ವಿಚಾರ ಚರ್ಚಾ ವೇದಿಕೆಯ ಮುನ್ನೆಲೆಗೆ ಬಂದಿದ್ದು, ಇದೇ ವಿಚಾರವನ್ನು ಮುಂದಿಟ್ಟು ಕೊಂಡು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡಿಸಲು ಯಾರೂ ಯತ್ನಿಸಬಾರದು ಎಂದು ರಾಜ್ಯ ಪಶು ಸಂಗೋಪನಾ ಇಲಾಖಾ ಸಚಿವ ಎ. ಮಂಜು ಮನವಿ ಮಾಡಿದ್ದಾರೆ.
ಸೋಮವಾರಪೇಟೆಯ ತಮ್ಮ ನಿವಾಸಕ್ಕೆ ಆಗಮಿಸಿದ್ದ ಸಚಿವರು ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ದೇವಟ್ ಪರಂಬು ವಿಚಾರದಲ್ಲಿ ಅಶಾಂತಿಯ ವಾತಾವರಣ ಉಂಟುಮಾಡುವದು ಬೇಡ. ಕಾನೂನಿನ ಅವಕಾಶಗಳನ್ನು ಬಳಸಿಕೊಂಡು ವಿವಾದವನ್ನು ಬಗೆಹರಿಸಬೇಕು. ವರ್ಗಗಳ ಮಧ್ಯೆ ಸಂಘರ್ಷ ನಡೆಯಬಾರದು. ಈ ಉದ್ದೇಶದಿಂದ ಸಂಬಂಧಿಸಿದವರನ್ನು ಕರೆದು ಸಮನ್ವಯ ಸಭೆ ನಡೆಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸುವದಾಗಿ ತಿಳಿಸಿದರು.
ಕೊಡಗು ಜಿಲ್ಲೆ ದೇಶದಲ್ಲಿಯೇ ಪ್ರವಾಸೋದ್ಯಮವಾಗಿ ಅತೀ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಜಿಲ್ಲೆ. ಇಂತಹ ಘಟನೆಗಳಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ. ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಯಾರೇ ಆದರೂ ಸ್ವಂತ ಇಚ್ಛೆಗಳನ್ನು ಸಾರ್ವಜನಿಕವಾಗಿ ಹೇರಬಾರದು. ಆ ಸ್ಥಳದಲ್ಲಿ ಕಳೆದ ಹಲವು ಸಮಯಗಳಿಂದಲೂ ಸ್ಥಳೀಯರು ವಾಸಿಸುತ್ತಿದ್ದು, ಕೃಷಿ ಮೂಲಕ ಜೀವನ ಕಂಡುಕೊಂಡಿ ದ್ದಾರೆ. ಇದೀಗ ಸ್ಮಾರಕಗಳನ್ನು ನಿರ್ಮಿಸಿ ಕಲಹಕ್ಕೆ ಎಡೆಮಾಡಿ ಕೊಡಬಾರದು. ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತನ್ನ ಸ್ನೇಹಿತ. ಕೊಡಗು ಜಿಲ್ಲೆ ದೇಶದ ಉತ್ತಮ ಪ್ರವಾಸೋದ್ಯಮ ಕ್ಷೇತ್ರವಾಗಬೇಕು. ಜನರು ನೆಮ್ಮದಿಯಿಂದ ಬದುಕು ಸಾಗಿಸಬೇಕು. ಜಿಲ್ಲೆಯಲ್ಲಿ ಅಶಾಂತಿ ಉಂಟಾಗಬಾರದು. ಹಳೆಯ ಘಟನೆಗಳನ್ನೇ ತಿರುವು ಹಾಕಬಾರದು. ಎಷ್ಟೋ ಘಟನೆಗಳು ಜರುಗಿ ಸಂವಿಧಾನ ಜಾರಿಗೆ ಬಂದಿದೆ. ಸರ್ಕಾರಗಳು ಅಸ್ತಿತ್ವದಲ್ಲಿವೆ. ಎಲ್ಲರೂ ಕಾನೂನಿನ ಕಟ್ಟಲೆಗಳಿಗೆ ಒಳಪಡಬೇಕು ಎಂದು ನಾಚಪ್ಪ ಅವರಲ್ಲಿ ಮನವಿ ಮಾಡುವದಾಗಿ ಸಚಿವರು ತಿಳಿಸಿದರು.
ತಾನು ಆ ಸಮಾಜ, ತಾನು ಈ ಸಮಾಜ ಎಂಬ ಪ್ರತಿಷ್ಠೆಗಳನ್ನು ಬಿಟ್ಟು ಕೊಡಗಿನವರು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಎಲ್ಲಾ ವರ್ಗದವರೂ ಇಲ್ಲಿದ್ದಾರೆ. ಎಲ್ಲಾ ಸಮಾಜ ಒಗ್ಗಟ್ಟಿನಿಂದ ಇರಬೇಕು. ಕೊಡಗಿನಲ್ಲಿ ಸಾಮಾಜಿಕ ಸಾಮರಸ್ಯ ಕೆಡಬಾರದು ಎಂದು ಎ. ಮಂಜು ಅವರು ಆಶಾವಾದ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ದಾಖಲೆಯಲ್ಲಿ ದೇವಟ್ ಪರಂಬು ಹೆಸರಿಲ್ಲ. ಆದರೂ ಘಟಿಸಿ ಹೋಗಿರುವ ಘಟನಾ ವಳಿಗಳನ್ನೇ ಇದೀಗ ಚರ್ಚೆ ನಡೆಸುವದು ಅಪ್ರಸ್ತುತ. ಒಟ್ಟಿನಲ್ಲಿ ಕೊಡಗು ಜಿಲ್ಲೆ ಶಾಂತಿಯಿಂದಿರಬೇಕು. ಎಲ್ಲಾ ವರ್ಗದ ಜನರೂ ಒಂದಾಗಿ ಬಾಳುವ ವಾತಾವರಣ ನಿರ್ಮಾಣವಾಗಬೇಕು ಎಂದು ಸಚಿವ ಎ. ಮಂಜು ಆಶಾಭಾವನೆ ವ್ಯಕ್ತಪಡಿಸಿದರು.
ದೇವಟ್ ಪರಂಬು ವಿಚಾರ ಇಷ್ಟೊಂದು ಚರ್ಚೆಗೆ ಬಂದು ಎರಡು ಪ್ರಮುಖ ವರ್ಗಗಳ ನಡುವೆ ಗೊಂದಲ ಉಂಟಾಗುತ್ತಿದ್ದರೂ ಜಿಲ್ಲೆಯ ಶಾಸಕದ್ವಯರು ಯಾವದೇ ಕ್ರಮಕ್ಕೆ ಮುಂದಾಗದೇ ಇರುವದು ಸಮಂಜಸವಲ್ಲ. ಶಾಸಕರು ತಕ್ಷಣ ಈ ಬಗ್ಗೆ ಸ್ಪಂದಿಸಬೇಕು. ರಾಜಕೀಯ ಬದಿಗಿಟ್ಟು ಜಿಲ್ಲೆಯ ಅಭಿವೃದ್ಧಿ, ಶಾಂತಿ, ನೆಮ್ಮದಿಗೆ ಶ್ರಮಿಸಬೇಕು ಎಂದು ಅಭಿಪ್ರಾಯಿಸಿದರು.
ಅನುಪಮಾ ರಾಜೀನಾಮೆ ವೈಯಕ್ತಿಕ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಡಿವೈಎಸ್‍ಪಿ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿರುವದು ಅವರ ವೈಯಕ್ತಿಕ ವಿಚಾರ. ಆದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬಾರದಿತ್ತು. ಪೊಲೀಸ್ ಕರ್ತವ್ಯದಲ್ಲಿದ್ದುಕೊಂಡೇ ಜನತೆಯ ಸೇವೆ ಮಾಡಬೇಕಿತ್ತು. ಅಧಿಕಾರದಲ್ಲಿದ್ದಾಗ ಮಾಡುವ ಸೇವೆ ಅಧಿಕಾರ ಇಲ್ಲದಾಗ ಮಾಡುವದು ಕಷ್ಟ. ಅನುಪಮಾ ಅವರು ರಾಜೀನಾಮೆ ವಾಪಸ್ ಪಡೆದು ಕರ್ತವ್ಯಕ್ಕೆ ಮರಳುವಂತಾಗಬೇಕು. ಈ ಪ್ರಕರಣದಲ್ಲಿ ಸಚಿವರ ರಾಜೀನಾಮೆ ಕೇಳುವದು ಸಮಂಜಸವಲ್ಲ ಎಂದು ಮಂಜು ಅಭಿಪ್ರಾಯಿಸಿದರು.