ನಾಪೆÇೀಕ್ಲು, ಜೂ. 17: ಅರಣ್ಯ ಪ್ರದೇಶದ ಬಳಿ, ಮಲೆನಾಡಿನ ಬೆಟ್ಟ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಗ್ರಾಮಾಂತರ ಪ್ರದೇಶಗಳಿಗೆ ಧಾಳಿ ಇಡುತ್ತಿರುವ ಮೂಲಕ ಜನರನ್ನು ಭಯಭೀತರನ್ನಾಗಿಸಿದೆ.

ಜಿಲ್ಲೆಯ ಅರಣ್ಯ ಪ್ರದೇಶ ವ್ಯಾಪ್ತಿಯ ಬಾಣಾವರ, ಕುಶಾಲನಗರ, ಸಿದ್ದಾಪುರ, ಪಾಲಿಬೆಟ್ಟ, ತಿತಿಮತಿ, ಬಾಳೆಲೆ. ಮಲೆನಾಡಿನ ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ, ಪೇರೂರು ಗ್ರಾಮಗಳಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಧಾಳಿಯಿಡುತ್ತಿರುವ ಮೂಲಕ ಜನರಲ್ಲಿ ಭೀತಿ ಮೂಡಿಸಿದೆ.

ವಾರದ ಹಿಂದೆ ತಂಡಿಯಂಡ ಮೋಳ್ ಬೆಟ್ಟ ತಪ್ಪಲಿನಲ್ಲಿ 10 ರಿಂದ 12 ಕಾಡಾನೆಗಳ ಹಿಂಡು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಭಯಭೀತರಾಗಿ ಹಿಂತಿರುಗಿದ ಘಟನೆ ನಡೆದ ಬಗ್ಗೆ ವರದಿಯಾಗಿರುವ ಬೆನ್ನಲ್ಲೇ ಕೋಕೇರಿ ಕೊಳಕೇರಿ ಗಡಿ ಭಾಗದಲ್ಲಿ ಪೆÇನ್ನಚಂಡ ಕುಟುಂಬಸ್ಥರ ಬಾಳೆ ತೋಟ ಸೇರಿದಂತೆ ಆ ವ್ಯಾಪ್ತಿಯ ಹಲವಾರು ಕೃಷಿಕರ ತೋಟವನ್ನು ಕಾಡಾನೆಗಳು ಪುಡಿಗಟ್ಟಿದ ಪ್ರಸಂಗ ವರದಿಯಾಗಿದೆ. ನಂತರ ಕೊಳಕೇರಿ ಮೂಲಕ ತನ್ನ ವಿಜಯಯಾತ್ರೆ ಆರಂಭಿಸಿದ ಕಾಡಾನೆ ಕೊಳಕೇರಿ, ಕುಂಜಿಲ ಗ್ರಾಮದ ಕೃಷಿಕರ ತೋಟಗಳನ್ನು ಹಾಳುಗೆಡುಹುತ್ತಾ ನೆಲಜಿ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಚೀಯಕಪೂವಂಡ ನವೀನ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರು ಕಾಡಾನೆ ಕಾಡಿಗಟ್ಟುವ ಕಾರ್ಯ ಕೈಗೊಂಡಿದ್ದು, ಇದು ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬದನ್ನು ಕಾದು ನೋಡಬೇಕಾಗಿದೆ.