ಸೋಮವಾರಪೇಟೆ,ಅ.4: ದಾರಿಯಲ್ಲಿ ತೆರಳುತ್ತಿದ್ದ ಸಂದರ್ಭ ಬೀದಿ ನಾಯಿಗಳು ಬೊಗಳಿದ ಪರಿಣಾಮ ಅಡ್ಡಾದಿಡ್ಡಿ ಮನಸೋಯಿಚ್ಛೆ ಓಡಾಡಿದ ಸಾಕಾನೆಯೊಂದು ಮಾವುತನಿಗೆ ಗಾಯಗೊಳಿಸಿ, ಸಾರ್ವಜನಿಕ ವಲಯದಲ್ಲಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.ಕೇರಳದ ಕಲ್ಲಿಕೋಟೆಯ ಮಹಮ್ಮದ್ ಕುಟ್ಟಿ ಮಾಲೀಕತ್ವದ 40ವರ್ಷ ಪ್ರಾಯದ ಹೆಣ್ಣಾನೆಯನ್ನು ಮರ ಎಳೆಯುವ ಕೆಲಸಕ್ಕೆಂದು ಕರೆತರಲಾಗಿತ್ತು. ಹಾನಗಲ್ ಗ್ರಾಮದಲ್ಲಿ ಟಿಂಬರ್ ಕೆಲಸವನ್ನು ಮುಗಿಸಿ, ಶನಿವಾರಸಂತೆಯಲ್ಲಿ ಮರವನ್ನು ಎಳೆಯಲು, ಮಾವುತರೊಂದಿಗೆ ತೆರಳುತ್ತಿದ್ದಾಗ ಜ್ಞಾನವಿಕಾಸ ಶಾಲೆಯ ಮುಂಭಾಗ ನಾಯಿಗಳು ಬೊಗಳಿವೆ.

ಈ ಸಂದರ್ಭ ಗಲಿಬಿಲಿಗೊಂಡ ಸಾಕಾನೆ, ಓಡಲು ಪ್ರಾರಂಭಿಸಿದಾಗ ದನಗಳು ಅಡ್ಡಬಂದಿದೆ. ಇದರಿಂದ ಕೆರಳಿದ ಆನೆ ಮನಸೋಯಿಚ್ಛೆ ಚಲಿಸಿದ್ದು, ಸಾಕಾನೆಯೊಂದಿಗೆ ಸಾಗುತ್ತಿದ್ದ ಶಿವಮೊಗ್ಗದ ಇಬ್ರಾಹಿಂ ಎಂಬ ಮಾವುತ ಅಂಕುಶದಿಂದ ಆನೆಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಇದರಿಂದ ಕ್ರೋಧಗೊಂಡ ಆನೆ, ಸೊಂಡಿಲಿನಿಂದ ಧಾಳಿ ಮಾಡಿದೆ.

ನೆಲಕ್ಕುರುಳಿದ ಇಬ್ರಾಹಿಂ ತೀವ್ರ ಗಾಯಗೊಂಡಿದ್ದಾರೆ. ತಲೆಗೆ ಪೆಟ್ಟಾಗಿ ಕಿವಿಯಲ್ಲಿ ರಕ್ತ ಸೋರುತ್ತಿದ್ದುದರಿಂದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಸಾಕಾನೆ ಮೇಲೆ ಕುಳಿತಿದ್ದ ಇನ್ನೋರ್ವ ಮಾವುತ ಜೋಸ್, ಆನೆಯ ಮೇಲಿಂದ ಇಳಿಯಲು ಸಾಧ್ಯವಾಗದೆ, ಜೀವಭಯದಿಂದ ಪರದಾಡಿದ್ದಾರೆ. ವಾಹನ ಸಂಚರಿಸುವ ದಾರಿಯಲ್ಲಿ ಓಡುತ್ತಿದ್ದ ಸಾಕಾನೆಯನ್ನು ಕಂಡ ಜನರು ಎದ್ದುಬಿದ್ದು ಓಡಿದ್ದಾರೆ. ಅರ್ಧ ಕಿ.ಮೀ. ಸಾಗಿದ ಆನೆಗೆ ಕೋಪ ಇಳಿದು, ಸಿ.ಪಿ.ಸತೀಶ ಅವರ ತೋಟಕ್ಕೆ ನುಗ್ಗಿದೆ. ನಂತರ ಮಾವುತ ಸಾಕಾನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

ಸ್ಥಳಕ್ಕೆ ವೃತ್ತನೀರಿಕ್ಷಕ ಎಂ. ಮಹೇಶ್, ಆರ್‍ಎಫ್‍ಓ ಮೊಯಿಸಿನ್ ಬಾಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂಜೆ ವೇಳೆಗೆ ಸಾಕಾನೆಯನ್ನು ಸಾಗಿಸಲಾಗುವದು ಎಂದು ಮಾವುತ ಹೇಳಿದರು.