ಸೋಮವಾರಪೇಟೆ, ನ.14: ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಘವು ಮುಂದಿನ ದಿನಗಳಲ್ಲಿ ಮರಣ ನಿಧಿಯನ್ನು ಸ್ಥಾಪಿಸಲಿದೆ ಎಂದು ಶ್ರೀ ನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ ಹೇಳಿದರು.ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ 17ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರುಗಳ ಸಹಕಾರ ಹಾಗೂ ಹಿರಿಯ ಸದಸ್ಯರುಗಳ ಮಾರ್ಗದರ್ಶನದೊಂದಿಗೆ ಸಂಘವು ಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ, ಆಟಿ ಸಂಭ್ರಮದಂತಹ ಸಮಾರಂಭಗಳನ್ನು ಆಯೋಜಿಸಿಕೊಂಡು ಸಮಾಜದ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಸಭೆಯಲ್ಲಿ ಎಸ್.ಎಸ್..ಎಲ್.ಸಿ., ದ್ವಿತೀಯ ಪಿಯುಸಿ, ಡಿಪ್ಲೋಮಾ, ಅಂತಿಮ ವರ್ಷದ ಬಿ.ಎ., ಬಿ.ಕಾಂ., ಬಿ.ಎಸ್ಸಿ, ಬಿ.ಇ., ಬಿ.ಸಿ.ಎ. ಸೇರಿದಂತೆ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.

ಸಂಘದ ವಾರ್ಷಿಕ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಇಂದಿರಾ ರಮೇಶ್ ವಾಚಿಸಿದರು. ಖಜಾಂಚಿ ಡೊಂಬಯ್ಯ ಪೂಜಾರಿ ಲೆಕ್ಕಪತ್ರ ಮಂಡಿಸಿದರು. ಮಹಿಳಾ ಘಟಕದ ನಿರ್ದೇಶಕಿ ಯಶೋಧ ಚಂದ್ರಶೇಖರ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಬಿ.ಎ. ಭಾಸ್ಕರ್ ಬಂಗೇರ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ ಜಂಟಿ ಕಾರ್ಯದರ್ಶಿ ಬಿ.ಕೆ. ಗಣೇಶ್, ಜಂಟಿ ಖಜಾಂಚಿ ರಮೇಶ್ ಕರಾವಳಿ, ನಿರ್ದೇಶಕರುಗಳಾದ ಬಿ.ಸಿ. ಕಿರಣ್, ಹರೀಶ್ ಕೋಟ್ಯಾನ್, ಬಿ.ಬಿ. ಗಂಗಾಧರ್, ಎಸ್.ಕೆ. ಸುಂದರ್, ವಿನೋದ್ ಜಯರಾಮ್, ಉಷಾ ಶೇಷಪ್ಪ ಹಾಗೂ ದಾನಿಗಳಾದ ಚಂದನಮಕ್ಕಿಯ ಕಾವೇರಿ ಜೋಯಪ್ಪ ಉಪಸ್ಥಿತರಿದ್ದರು.