ಮಡಿಕೇರಿ, ಜ. 4: ಹನ್ನೊಂದು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ತಲ್ಲಣ ಉಂಟು ಮಾಡಿದ್ದ ಮಂಡೇಟಿರ ಬೋಪಣ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಲ್ಕು ಆರೋಪಿಗಳಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಮಡಿಕೇರಿ ನಿವಾಸಿ, ಮಂಡೇಟಿರ ಬೋಪಣ್ಣ ತನ್ನ ಸಹಚರರ ಜೊತೆ ಸೇರಿ 2000ನೇ ಇಸವಿಯಲ್ಲಿ ಕಾಲೂರಿನ ತುಳುನಾಡಂಡ ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ತುಳುನಾಡಂಡ ಮಹೇಶ್ ಮತ್ತು ಆತನ ಸಹಚರರು 2005ನೇ ಇಸವಿಯ ಜನವರಿ 10ನೇ ತಾರೀಕಿನಂದು ಸಂಚು ರೂಪಿಸಿ, ಬೋಪಣ್ಣ ತನ್ನ ಜಿಪ್ಸಿಯಲ್ಲಿ (ಕೆ.ಎ.03 ಎಂ.ಸಿ.3451) ಚೈನ್‍ಗೇಟ್‍ಗಾಗಿ ಮನೆಗೆ ತೆರಳುತ್ತಿದ್ದ ಅವರ ಮೇಲೆ ಗುಂಡು ಹಾರಿಸಿ, ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದರು.

ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದ ಬೋಪಣ್ಣ ಚಲನ-ವಲನದ ಬಗ್ಗೆ ಹಲವಾರು ದಿನಗಳಿಂದ ಕಣ್ಣಿಟ್ಟು ಆರೋಪಿಗಳು ಕತ್ತಲಲ್ಲಿ ಕೃತ್ಯವೆಸಗಿದ್ದರು. ಮೃತ ಬೋಪಣ್ಣ ಹಾಗೂ ತುಳುನಾಡಂಡ ಮಹೇಶ್ ನಡುವೆ ಇದ್ದ ವೈಮನಸ್ಸಿಗೆ ಸಂಬಂಧಿಸಿದಂತೆ ಕೆಲವು ಆಪ್ತರು ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದರಾದರೂ ಫಲ ಕೊಟ್ಟಿರಲಿಲ್ಲ.

ಪರಿಣಾಮ ಮಹೇಶ್ ದ್ವೇಷಕ್ಕೆ ಬೋಪಣ್ಣ ಬಲಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಪಣ್ಣ ಸಹೋದರ ಎಂ.ಬಿ. ಮಂದಪ್ಪ ಎಂಬವರು ನೀಡಿದ ದೂರಿನ ಮೇರೆ ಮಡಿಕೇರಿ ನಗರ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು, ಆರೋಪಿಗಳ ಮೇಲೆ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಾದ ತುಳುನಾಡಂಡ ಎ. ಮಹೇಶ್, ತುಳುನಾಡಂಡ ಎ. ಅರುಣ, ಪಳೆಯಂಡ ಎಂ. ಮಹೇಶ್, ಕಾರೇರ ಯು. ದಿನೇಶ್ ಇವರುಗಳಿಗೆ ಬೋಪಣ್ಣನನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ಕಠಿಣ ಜೀವಾವಧಿ ಶಿಕ್ಷೆ ಮತ್ತು

(ಮೊದಲ ಪುಟದಿಂದ) ತಲಾ 5000 ರೂ. ದಂಡ, ಸಂಚು ಹೂಡಿ ಕೊಲೆ ಮಾಡಿದ ಅಪರಾಧಕ್ಕಾಗಿ ಪುನಹ ಕಠಿಣ ಜೀವಾವಧಿ ಶಿಕ್ಷೆ ಮತ್ತು ತಲಾ 2000 ರೂ. ದಂಡ, ಪ್ರಕರಣದ ಪ್ರಮುಖ ಆರೋಪಿ ಟಿ.ಎ. ಮಹೇಶ್‍ಗೆ ಕೊಲೆಗೆ ಪ್ರಚೋದನೆ ನೀಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 5000 ರೂ. ದಂಡ, ಟಿ.ಎ. ಅರುಣ್‍ಗೆ ಬಂದೂಕು ಕಾಯಿದೆಯಡಿ ಅಪರಾಧಗಳಿಗಾಗಿ 2 ವರ್ಷ ಮತ್ತು 4 ವರ್ಷ ಕಠಿಣ ಸಜೆ ಮತ್ತು ರೂ.4000 ದಂಡ, ಪಿ.ಎಂ. ಮಹೇಶ್‍ಗೂ ಬಂದೂಕು ಕಾಯಿದೆಯಡಿಯಲ್ಲಿನ ಅಪರಾಧಕ್ಕಾಗಿ 4 ವರ್ಷ ಕಠಿಣ ಸಜೆ ಮತ್ತು 2000 ದಂಡ, ಪಿ.ಎಂ. ಮಹೇಶ್‍ಗೆ ಬಂದೂಕು ನೀಡಿದ ಆರೋಪಕ್ಕಾಗಿ ರವಿ ಈ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದ 3 ತಿಂಗಳು, 5 ದಿನವನ್ನು ಶಿಕ್ಷೆಯೆಂದು ಪರಿಗಣಿಸಿ 2000 ರೂ. ದಂಡ ವಿಧಿಸಿದ್ದಾರೆ. ವಸೂಲಾಗುವ ದಂಡದ ಹಣದಲ್ಲಿ 25,000 ರೂ.ಗಳನ್ನು ಬೋಪಣ್ಣ ಪತ್ನಿ ಪಿ.ಟಿ. ಸ್ವರ್ಣ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ ಅವರು ವಾದ ಮಂಡಿಸಿದರು.