ಮಡಿಕೇರಿ, ಅ. 5: ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ತಾ. 7 ರಂದು (ನಾಳೆ) ಮಹಿಳಾ ದಸರಾ ಆಯೋಜಿಸಲಾಗಿದ್ದು ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಮಡಿಕೇರಿಯ ನಗರಸಭೆಯ ಮಹಿಳಾ ಸದಸ್ಯೆಯರೇ ನಿರ್ವಹಿಸುತ್ತಿರುವ ಮಹಿಳಾ ದಸರಾ ಅಂಗವಾಗಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಿರಿಧಾನ್ಯ ಮೇಳ ಸ್ಪರ್ಧೆಯಲ್ಲಿ ಗ್ರಾಮೀಣ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ತಂದು ಸ್ಪರ್ಧೆಗೆ ಇರಿಸಬಹುದಾಗಿದೆ. ಸೊಪ್ಪು, ಕಣಿಲೆ, ಕೆಸ ಮೊದಲಾದ ಸಾಮಗ್ರಿಗಳೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ದೊರಕುವ ಪದಾರ್ಥಗಳನ್ನು ಬಳಸಿ ತಯಾರಿಸುವ ಖಾದ್ಯಗಳು, ಶರಬತ್ತುಗಳು ಸೇರಿದಂತೆ ವೈವಿಧ್ಯಮಯ ಖಾದ್ಯ ಪದಾರ್ಥಗಳನ್ನು ಸ್ಪರ್ಧೆಗೆ ಇರಿಸಬಹುದಾಗಿದೆ.

ಜಿಲ್ಲೆಯ ಮಹಿಳಾ ಸಂಘಟನೆಗಳಿಗಾಗಿ ಉತ್ಪನ್ನಗಳ ಮಾರಾಟ ಮೇಳ ಏರ್ಪಡಿಸಲಾಗಿದೆ. ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆ, ಏಕಪಾತ್ರಾಭಿನಯ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಸೀರೆಯ ನಿಖರ ಬೆಲೆ ಹೇಳಿ ಸೀರೆ ಗೆಲ್ಲುವ ಸ್ಪರ್ಧೆ, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಸೇರಿದಂತೆ ಮಹಿಳೆಯರಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ದಸರಾ ಸಾಂಸ್ಕøತಿಕ ಸಮಿತಿ ಆಯೋಜಿಸಿದೆ. ಈಗಾಗಲೇ ಜಿಲ್ಲೆಯ ಮಹಿಳೆಯರಿಂದ ಮಹಿಳಾ ದಸರಾಕ್ಕೆ ಉತ್ತಮ ಸ್ಪಂದನೆ ದೊರಕಿದ್ದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವವರು ಬೆಳಗ್ಗೆ 9.30 ಗಂಟೆಗೆ ಗಾಂಧಿ ಮೈದಾನಕ್ಕೆ ಬಂದು ಮಹಿಳಾ ದಸರಾ ಸ್ಪರ್ಧೆಗೆ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿ ಸ್ಪರ್ಧೆ ಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧೆಗಳು 10 ಗಂಟೆಗೆ ಆರಂಭವಾಗಲಿದೆ. ಶುಕ್ರವಾರ ಸಂಜೆ 6 ಗಂಟೆಯಿಂದ ನಾಡಿನ ಹೆಸರಾಂತ ಗಾಯಕಿ ಎಂ.ಡಿ. ಪಲ್ಲವಿ ಅವರಿಂದ ಗಾನ ಸಂಭ್ರಮ ಸೇರಿದಂತೆ ಮಹಿಳಾ ಕಲಾ ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.