ಮಡಿಕೇರಿ, ಜೂ. 22: ಮಡಿಕೇರಿಯ ಕೋಟೆ, ಚಿತ್ರದುರ್ಗದ ಕೋಟೆಯಂತಹ ಹೆಸರನ್ನು ನೀವು ಕೇಳಿರಬಹುದು. ಆದರೆ ಇದ್ಯಾವ ನೀಲಗಿರಿ ಕೋಟೆ ಎಂದು ಹುಬ್ಬೇರಿಸದಿರಿ...! ಇದು ಅಂತಿಂತಹ ಕೋಟೆಯಲ್ಲ. ರೈತಾಪಿವರ್ಗದ ನಿದ್ದೆಗೆಡಿಸಿದ್ದ ಅಪಾರ ಹಾನಿ ಮಾಡಿದ... ಮಾನವ ಹಂತಕರಾಗಿ ಆತಂಕ ಸೃಷ್ಟಿಸಿದ್ದ ಭಯಂಕರ ಜೀವಿಯನ್ನು ಒಳ್ಳೆಯದಾರಿಗೆ ತಿದ್ದಿದ್ದ ಕೋಟೆಯೇ..., ಈ ನೀಲಗಿರಿ ಕೋಟೆ. ಈ ಕೋಟೆಯೊಳಗೆ ಬಂಧನಕ್ಕೆ ಒಳಗಾಗಿದ್ದು, ಒಂದಲ್ಲ ಎರಡು..., ಭಾರೀ ಗಾತ್ರದ ಜೀವಿಗಳು... ಇದೇನಪ್ಪಾ ಎಂಬ ಕುತೂಹಲವೇ...? ಬಂಧನದಲ್ಲಿದ್ದದ್ದು, ಎರಡು ಪುಂಡಾನೆಗಳು...

ಚೆಟ್ಟಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಸಮಯಗಳಿಂದ ರೈತರ ತೋಟ, ಗದ್ದೆಗಳಿಗೆ ಲಗ್ಗೆಯಿಟ್ಟು ಹಾನಿ ಮಾಡುವದರೊಂದಿಗೆ ಮೂರು ಮಾನವ ಜೀವ ಬಲಿ ಪಡೆದು ಹಲವರನ್ನು ಘಾಷಿಗೊಳಪಡಿಸಿದ್ದ ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ ಮೂರು ತಿಂಗಳ ಹಿಂದೆ ಸೆರೆ ಹಿಡಿದಿತ್ತು.

ಇಬ್ಬರನ್ನು ಬಲಿತೆಗೆದು, ನಾಲ್ವರನ್ನು ಗಾಯಗೊಳಿಸಿದ್ದ ಒಂಟಿಕೊಂಬಿನ ಸಲಗ ಹಾಗೂ ಅಮೀನಾ ಎಂಬ ಮಹಿಳೆಯನ್ನು ಕೊಂದು ಹಾಕಿದ ಎರಡು ದಂತದ ಮತ್ತೊಂದು ಕೊಬ್ಬಿದ ಸಲಗವನ್ನು ಅರಣ್ಯ ಇಲಾಖೆ ಮಾರ್ಚ್ 24 ಹಾಗೂ 25ರಂದು ಸೆರೆ ಹಿಡಿದಿತ್ತು. ಸೆರೆ ಹಿಡಿದ ಈ ಆನೆಗಳನ್ನು ಪಳಗಿಸುವ ಕಾರ್ಯ ದುಬಾರೆಯಲ್ಲಿ ಕಳೆದ ಮೂರು ತಿಂಗಳಿನಿಂದ ನಡೆದಿದೆ. ಅನುಭವಿ ಮಾವುತರು ಈ ಪುಂಡಾನೆಗಳನ್ನು ಪಳಗಿಸಿದ್ದಾರೆ. ಸೆರೆ ಹಿಡಿಯಲ್ಪಟ್ಟ ಆನೆಗಳನ್ನು ಬಂಧನದಲ್ಲಿಟ್ಟಿದ್ದು, ನೀಲಗಿರಿ ಮರ ಬಳಸಿ ನಿರ್ಮಿಸಿದ ಭದ್ರ ಕೋಟೆ (ಕ್ರಾಲ್)ಯಲ್ಲಿ. ಬಂಧಿತ ಆನೆಗಳನ್ನು ಕ್ರಾಲ್ ಎಂದು ಕರೆಯಲ್ಪಡುವ ಈ ‘ಸೆಲ್’ನೊಳಗೆ ಪಳಗಿಸಲಾಗಿದ್ದು, ಇದೀಗ ಪುಂಡಾನೆಗಳು ಸ್ವಚ್ಛಂದದ ತುಂಟಾಟ ಬಿಟ್ಟು ತಲೆಭಾಗಿವೆ. ಕಾಡಿನ ರಾಜ ಇದೀಗ ಮಾನವ ಹೇಳಿದ ಮಾತಿನಂತೆ ನಡೆಯುವಂತಾಗಿದೆ.

ಮೂರು ತಿಂಗಳ ಕಾಲ ’ಕ್ರಾಲ್’ನೊಳಗೆ ಪಾಠ ಕಲಿತಿರುವ ಈ ಪುಂಡರನ್ನು ಬಂಧನಕ್ಕೊಳಗಾದ ಬಳಿಕ ಇದೀಗ ಪ್ರಥಮ ಬಾರಿಗೆ ಹೊರ ಬಿಡಲಾಗುತ್ತಿದೆ. ತಾ. 24ರಂದು (ನಾಳೆ) ಡಾ|| ಉಮಾಶಂಕರ್ ಅವರ ಉಪಸ್ಥಿತಿಯಲ್ಲಿ ಕ್ರಾಲ್‍ನಿಂದ ಹೊರಕ್ಕೆ ಬಿಡಲು ಸಿದ್ಧತೆ ನಡೆದಿದೆ. ಹೊರ ಬಿಟ್ಟರೂ ಈ ಆನೆಗಳನ್ನು ‘ಫುಲ್ ಫ್ರೀ’ ಆಗಿ ಬಿಡಲಾಗುತ್ತಿಲ್ಲ. ಕಾಲಿನ ಸರಪಳಿ ಹಾಗೇ ಇರುತ್ತದೆ. ಮಾತ್ರವಲ್ಲದೆ ಕಟ್ಟಿ ಹಾಕಿ ಇನ್ನಷ್ಟು ದಿನ ಹೆಚ್ಚಿನ ತರಬೇತಿ ನೀಡಲಾಗುವದು.

ಬಿಡುಗಡೆ ಭಾಗ್ಯದ ಸಂದರ್ಭ ಮುನ್ನೆಚ್ಚರಿಕೆಗಾಗಿ ಸಾಕಾನೆಗಳಾದ ಅಜಯ್, ಗೋಪಿ, ಕಾವೇರಿ, ಹರ್ಷ, ಪ್ರಶಾಂತ್ ಹದ್ದುಗಣ್ಣಿನಲ್ಲಿ ಕಾವಲಾಗಿರುತ್ತವೆ.

ಕುಶಾಲನಗರ ವಲಯ ಅರಣ್ಯಾಧಿಕಾರಿ ಚಿಣ್ಣಪ್ಪ ಅವರ ಮುಂದಾಳತ್ವದಲ್ಲಿ ಈ ಆನೆಗಳನ್ನು ಸೆರೆ ಹಿಡಿಯಲಾಗಿತ್ತು. ಮಾವುತರು ಗಳಾದ ಶಂಕರ, ಹರೀಶ್, ವಿಜಿತ್, ರಾಜಣ್ಣ, ಪುಂಡರಿಗೆ ಬುದ್ದಿ ಕಲಿಸಿದ್ದಾರೆ. ಇದೀಗ ಪಳಗಿದ ಆನೆಗಳಿಗೆ ದ್ರೋಣ ಹಾಗೂ ಭೀಮ ಎಂದು ನಾಮಕರಣ ಮಾಡುವ ಚಿಂತನೆ ನಡೆದಿದೆ. ಬಿಡುಗಡೆ ಸಂದರ್ಭವೇ ನಾಮಕರಣ ‘ಶಾಸ್ತ್ರ’ವೂ ನಿಗದಿಯಾಗಿದೆ.

- ಶಶಿ ಸೋಮಯ್ಯ