ವೀರಾಜಪೇಟೆ, ನ.30: ಪಟ್ಟಣ ಪಂಚಾಯಿತಿಯಿಂದ ವ್ಯಾಪಾರ ನಡೆಸಲು ಭೋಗ್ಯ ಹಾಗೂ ಬಾಡಿಗೆ ಒಪ್ಪಂದದ ಆಧಾರದಲ್ಲಿ ಮಳಿಗೆಗಳನ್ನು ಪಡೆದಿರುವ ಬಾಡಿಗೆದಾರರನ್ನು ತೆರವುಗೊಳಿಸದಂತೆ ಇಲ್ಲಿನ ಸಂತೆ ಮಾರುಕಟ್ಟೆಯ ಬಾಡಿಗೆದಾರರು ಇಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರಿಗೆ ಖುದ್ದು ಮನವಿ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಒಮ್ಮತವಾಗಿ ಬಂದ ಬಾಡಿಗೆದಾರರ ಪರವಾಗಿ ಟಿ.ಪಿ.ಕೃಷ್ಣ ಹಾಗೂ ಮಲ್ಲಂಡ ಮಧುದೇವಯ್ಯ ಅವರು ಬಾಡಿಗೆದಾರರ ಸಮಸ್ಯೆಗಳನ್ನು ವಿವರಿಸಿದರಲ್ಲದೆ ರಾಜ್ಯ ಸರ್ಕಾರದ ಸುತ್ತೋಲೆ ಹಾಗೂ ಉಚ್ಚ ನ್ಯಾಯಾಲಯದ ಆದೇಶವನ್ನು ಮಾರುಕಟ್ಟೆಯ ಶಿಥಿಲಗೊಂಡಿರುವ ಕಟ್ಟಡವನ್ನು ನವೀಕರಿಸಿದ ನಂತರ ಕಾರ್ಯರೂಪಕ್ಕೆ ತರುವಂತೆ ಪಟ್ಟಣ ಪಂಚಾಯಿತಿ ಸದಸ್ಯರುಗಳನ್ನು ಒತ್ತಾಯಿಸಿದರು.
ಸಚಿನ್ ಕುಟ್ಟಯ್ಯ ಮಾತನಾಡಿ ಮುಂದಿನ ಕ್ರಮದ ಭರವಸೆಯನ್ನು ಬಾಡಿಗೆದಾರರ ಒಕ್ಕೂಟಕ್ಕೆ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿರುವಾಗಲೇ ಈ ಬಾಡಿಗೆದಾರರ ತಂಡ ಮನವಿ ಸಲ್ಲಿಸಲು ಕಾರ್ಯಾಲಯಕ್ಕೆ ಬಂದಾಗ ಕಚೇರಿ ಬಳಿ ಪೊಲೀಸರು ತಡೆದರು. ಪೊಲೀಸರು ಅಧಿಕಾರಿಗಳು ಹಾಗೂ ಬಾಡಿಗೆದಾರರ ಪ್ರಮುಖರ ನಡುವೆ ಕೆಲ ನಿಮಿಷಗಳ ಕಾಲ ವಾಗ್ವಾದ ನಡೆಯಿತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಿಂದಿರುಗಿದ ನಂತರ ಪೊಲೀಸರು ಬಾಡಿಗೆದಾರರ ತಂಡಕ್ಕೆ ಅವಕಾಶ ನೀಡಿದರು.