ಕುಶಾಲನಗರ, ಆ. 17: ಗುಡ್ಡೆಹೊಸೂರಿನಲ್ಲಿ ಭಾನುವಾರ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಬರ್ಬರ ಹತ್ಯೆ ಪ್ರಕರಣದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಹರಸಾಹಸ ಪಡುವಂತಾಗಿದೆ. ಘಟನೆ ನಡೆದು 3 ದಿನಗಳು ಕಳೆದರೂ ಆರೋಪಿಗಳ ಬಗ್ಗೆ ಯಾವದೇ ರೀತಿಯ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಹಲವು ಪೊಲೀಸರ ತಂಡಗಳು ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಈ ನಡುವೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸೆಕ್ಷನ್ 144 ಈ ತಿಂಗಳ 19 ರ ತನಕ ವಿಸ್ತರಿಸಿ ಆದೇಶ ಹೊರಡಿಸಿದೆ. 19 ರ ಬೆಳಗಿನ ತನಕ ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆಯ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಕುಶಾಲನಗರ ಸುತ್ತಮುತ್ತಲಿನ ಪ್ರಾರ್ಥನಾ ಮಂದಿರಗಳಿಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿರುವ ದೃಶ್ಯ ಕಂಡುಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಕುಶಾಲನಗರದಲ್ಲಿ ಮೊಕ್ಕಾಂ ಹೂಡಿದ್ದು ಚಾಮರಾಜನಗರ ಎಸ್ಪಿ ಮುತ್ತುರಾಜ್ ಹಾಗೂ ಹಾಸನ ಎಎಸ್ಪಿ ಶೋಭಾರಾಣಿ ಅವರೊಂದಿಗೆ ಖುದ್ದಾಗಿ ಕಾರ್ಯಾಚರಣೆ ಹಾಗೂ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರ ಸರ್ಪಗಾವಲು ಮುಂದುವರೆದಿದೆ. ಮಡಿಕೇರಿ ಜಿಲ್ಲಾ ಅಪರಾಧ ಪತ್ತೆದಳ ಸೇರಿದಂತೆ 5 ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಘಟನೆ ನಡೆದ ಗುಡ್ಡೆಹೊಸೂರು ವ್ಯಾಪ್ತಿಯ ವಿವಿಧೆಡೆ ಸಿಸಿ ಕ್ಯಾಮೆರಾಗಳಿಂದ ಮಾಹಿತಿ ಕಲೆ ಹಾಕುವದರೊಂದಿಗೆ ಹಲವು ದೂರವಾಣಿ ಕರೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಘಟನೆ ನಡೆದ ಸಂದರ್ಭ ಮೃತ ಪ್ರವೀಣ್ ಪೂಜಾರಿ ಓಡಾಟ ನಡೆಸಿದ ಹಲವೆಡೆ ಆತನ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಗುಡ್ಡೆಹೊಸೂರು, ಸಿದ್ದಾಪುರ ರಸ್ತೆಯ ಹೋಂಸ್ಟೇಗಳ ಮಾಹಿತಿ ಕಲೆಹಾಕಲಾಗುತ್ತಿದೆ. ಯಾವದೇ ಸುಳಿವು ದೊರಕದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇನ್ನೆರೆಡು ದಿನಗಳ ಕಾಲಾವಕಾಶ ಕೋರಿದ್ದು, ಆರೋಪಿಗಳ ಪತ್ತೆ ಮಾಡುವದಾಗಿ ಭರವಸೆ ನೀಡಿದ್ದಾರೆ.

ಈ ನಡುವೆ ಆಟೋ ಚಾಲಕರು ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತನಿಖೆ ಚುರುಕುಗೊಳಿಸುವಂತೆ ಒತ್ತಾಯ ಮಾಡಿದ್ದಾರೆ. ಆಟೋ ಚಾಲಕರ ಸಂಘದ ಅಧ್ಯಕ್ಷ ಮಹೇಶ್ ನೇತೃತ್ವದಲ್ಲಿ ತನಿಖಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿರುವದಾಗಿ ತಿಳಿಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ವಿಳಂಭವಾದಲ್ಲಿ ಜಿಲ್ಲೆಯಾದ್ಯಂತ ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.

ಹಿಂದೂಪರ ಸಂಘಟನೆಗಳು ಸೇರಿದಂತೆ ಕೊಡಗು ಜಿಲ್ಲೆಯ ಸರ್ವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಉಗ್ರ ಪ್ರತಿಭಟನೆ ನಡೆಸುವದಾಗಿ ಮಹೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕುಶಾಲನಗರ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ಪ್ರಾರಂಭಗೊಂಡಿದ್ದು ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಸಿಬ್ಬಂದಿಗಳು ನಾಗರಿಕರೊಂದಿಗೆ ಸಂಪರ್ಕ ಕೊರತೆ ಯೊಂದಿಗೆ ಠಾಣೆಯ ಗುಪ್ತಚರ ವಿಭಾಗದ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಮಾಹಿತಿ ಕಲೆಹಾಕುವಲ್ಲಿ ಸಂಪೂರ್ಣ ವಿಫಲರಾಗುತ್ತಿರುವದೇ ಈ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. - ಸಿಂಚು