ಗೋಣಿಕೊಪ್ಪಲು, ಅ. 21 : ಪಾಲಿಬೆಟ್ಟ ನಮ್ಮ ಶಾಲೆಯಲ್ಲಿ ನಿರ್ಮಿಸಿರುವ ಹುತಾತ್ಮ ಯೋಧ ಲಾನ್ಸ್ ನಾಯಕ್ ಹೆಚ್. ವಿ. ಯೆಂಗಟ ಅವರ ಸ್ಮಾರಕ ಅನಾವರಣವನ್ನು ಬಿಎಸ್‍ಎಫ್ ಡಿಐಜಿ (ನಿವೃತ್ತ) ಬೊಮ್ಮಂಡ ಚಂಗಪ್ಪ ಅನಾವರಣಗೊಳಿಸಿದರು.
ನಮ್ಮ ಪ್ರೌಢಶಾಲಾ ಹಾಗೂ ಕೊಡಗು ಪೊಲೀಸ್ ಇಲಾಖೆ ಸಹಯೋಗದಲ್ಲಿ ನಿರ್ಮಿಸಿರುವ ಸ್ಮಾರಕ ಅನಾವರಣ ಸಂದರ್ಭ ಸಿದ್ದಾಪುರ ಪೊಲೀಸ್ ಉಪನಿರೀಕ್ಷಕ ಎ.ಪಿ.ಸೀತಾರಾಂ, ಸೈನಿಕ ಬಿ. ಎ. ಮೋಹನ್, ಶಾಲಾ ಆಡಳಿತ ಮಂಡಳಿ ಸದಸ್ಯರು, ಹುತಾತ್ಮ ಯೋಧನ ಪೋಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಸ್ಮಾರಕಕ್ಕೆ ಗೌರವ ನೀಡಲಾಯಿತು.
ನಮ್ಮ ಪ್ರೌಡಶಾಲೆಯಲ್ಲಿ ಹಳೆಯ ವಿದ್ಯಾರ್ಥಿಯಾಗಿದ್ದ ಯೆಂಗಟ, 1985 ರಲ್ಲಿ ಇದೇ ಶಾಲೆಯಲ್ಲಿ ಎಸ್ಸೆಸೆಲ್ಸಿ ವಿದ್ಯಾಭ್ಯಾಸ ಪೂರೈಸಿ 14 ವರ್ಷ ದೇಶಕ್ಕಾಗಿ ಸೇವೆ ನೀಡಿರುವ ಬಗ್ಗೆ ಕಾರ್ಯಕ್ರಮದಲ್ಲಿ ಗೌರವ ನೀಡಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಉರುವಂಗಡ ಪೊನ್ನಪ್ಪ ಮಾತನಾಡಿ, ಯೋಧರ ಪೋಷಕರು ಅತ್ಯಂತ ಪುಣ್ಯವಂತರು. ಯೋಧರು ಮಾಡಿರುವ ತ್ಯಾಗ ಹಾಗೂ ಬಲಿದಾನ ಪ್ರತಿಯೊಬ್ಬರ ಮನಸ್ಸಿನಲ್ಲಿ ಸದಾಕಾಲ ಉಳಿಯುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ವೀರ ಯೋಧರ ಕಾರ್ಯವೈಖರಿ ಪ್ರಜೆಗಳನ್ನು ನಿಶ್ಚಿಂತೆಯಿಂದ ಜೀವಿಸಲು ಮುಖ್ಯ ಕಾರಣವಾಗಿದೆ. ಗುರುಭಕ್ತಿ, ದೇಶಭಕ್ತಿ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆ ಹುತಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಗೆ ಆಣಿಯಾಗಬೇಕು ಎಂದರು.