ನಾಪೋಕ್ಲು, ಮೇ 15: ನಂಬಿಕೆಯಿಂದ ಕೆಲಸ ನೀಡಿದ ಪ್ರತಿಫಲವಾಗಿ ಹಣ ವಂಚಿಸಿ ಪರಾರಿಯಾದ ಘಟನೆ ನಾಪೋಕ್ಲುವಿನಲ್ಲಿ ನಡೆದಿದೆ.
ಪಟ್ಟಣದಲ್ಲಿರುವ ಚಾಮುಂಡಿ ಪೆಟ್ರೋಲ್ ಬಂಕ್ ಪ್ರಾರಂಭವಾಗಿ ಎರಡು ವರ್ಷಗಳಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ಪೆಟ್ರೋಲ್ ಬಂಕ್‍ನ ಮ್ಯಾನೇಜರ್ ಆಗಿ ನವೀನ್ ಎಂಬಾತ ಕರ್ತವ್ಯ ನಿರ್ವಹಿಸುತ್ತಿದ್ದು, ತಾ. 9 ರಂದು ಮಾಲೀಕ ಮೋಹನ್ ಅವರು ಲೆಕ್ಕ ಪರಿಶೋಧನೆಗೆ ಮುಂದಾದಾಗ ಬಹಳಷ್ಟು ವ್ಯತ್ಯಯ ಕಂಡು ಬಂದಿದೆ. ಆ ಸಂದರ್ಭ ನವೀನ್ ನಾಳೆ ಲೆಕ್ಕಪತ್ರ ಸರಿಪಡಿಸುವದಾಗಿ ತಿಳಿಸಿದ್ದಾನೆ.
ಮರುದಿನ ಎಂದಿನಂತೆ ಪೆಟ್ರೋಲ್ ಬಂಕ್ ತೆರೆಯುವ ಸಮಯದಲ್ಲಿ ತನ್ನ ಸಹದ್ಯೋಗಿಗಳಿಗೆ ಕರೆ ಮಾಡಿದ ನವೀನ್, ಬಂಕಿನ ಕೀ ಅಲ್ಲಿ ನಿಲ್ಲಿಸಿರುವ ಸ್ಕೂಟರ್‍ನಲ್ಲಿಟ್ಟಿದ್ದು, ಬಂಕ್ ತೆರೆಯುವಂತೆ ಸೂಚಿಸಿದ್ದಾನೆ. ತನ್ನ ಮಗುವಿಗೆ ಹುಷಾರಿಲ್ಲದ ಕಾರಣ ಬರಲು ತಡವಾಗುವದಾಗಿ ತಿಳಿಸಿದ್ದಾನೆ. ಅದರಂತೆ ಎಂದಿನಂತೆ ಬಂಕ್ ಕಾರ್ಯ ಮಾಮೂಲಿನಂತೆ ಸಾಗಿದೆ. ಮಾಲೀಕರು ಬಂದು ನವೀನ್ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ನಂತರ ನವೀನ್‍ಗೆ ಕರೆ ಮಾಡಿದಾಗ ಆತನ ದೂರವಾಣಿ ಸ್ವಿಚ್ ಆಫ್ ಆಗಿತ್ತು. ಅನುಮಾನ ಬಂದು ಗಲ್ಲಾಪೆಟ್ಟಿಗೆ ಪರಿಶೀಲಿಸಿದಾಗ ಅದರಲ್ಲಿ ವಹಿವಾಟಿನ ಹಣ ರೂ. 3,27,000 ನಾಪತ್ತೆಯಾಗಿತ್ತು. ಆತನ ಮನೆಗೆ ಹೋಗಿ ನೋಡಿದಾಗ ಮನೆಗೆ ಬೀಗ ಹಾಕಿ ಹೆಂಡತಿ ಮಗುವಿನೊಂದಿಗೆ ಪರಾರಿಯಾಗಿದ್ದನು.
ತಾ. 11 ರಂದು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮಾಲೀಕ ಮೋಹನ್ ಅವರು ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಠಾಣಾಧಿಕಾರಿ ರಘು ಅವರು ಆರೋಪಿಯ ಜಾಡು ಹಿಡಿದು ಪಿರಿಯಾಪಟ್ಟಣದಲ್ಲಿರುವ ನವೀನನ ಸಹೋದರಿ ಮನೆಯಲ್ಲಿ ಅಡಗಿ ಕುಳಿತ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಣ ಎಗರಿಸಿ ನಾಪತ್ತೆಯಾದ ಆರೋಪಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.