ವೀರಾಜಪೇಟೆ, ಜೂ. 22: ಅಂತರ್ರಾಷ್ಟ್ರೀಯ ಒಲಂಪಿಕ್ ದಿನಾಚರಣೆಯ ಅಂಗವಾಗಿ ಹಾಕಿ ಕೂರ್ಗ್ ಸಂಸ್ಥೆಯು ತಾ. 23 ರಂದು (ಇಂದು) ಪೊನ್ನಂಪೇಟೆ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಅಂತರ್ರಾಷ್ಟ್ರೀಯ ಒಲಂಪಿಕ್ ದಿನವನ್ನು ಪೂರ್ವಹ್ನ 10.30 ಗಂಟೆಗೆ ಆಚರಿಸಲಾಗುವದು ಎಂದು ಹಾಕಿ ಕೊಡಗು ಸಂಸ್ಥೆಯ ಕಾರ್ಯದರ್ಶಿ ಪಳಂಗಂಡ ಲವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲವ ಕುಮಾರ್ ಅವರು, ಹಾಕಿ ಕೊಡಗು ಸಂಸ್ಥೆಯು ಶಾಶ್ವತ ಮಾನ್ಯತೆಯನ್ನು ಪಡೆದುಕೊಂಡಿದ್ದು ಇದು ಹಾಕಿ ಕೊಡಗು ಸಂಸ್ಥೆಯ ಮೊದಲ ದಿನಾಚರಣೆಯಾಗಿದೆ. ಯುವಕರು ಕ್ರೀಡೆಯಲ್ಲಿ ನಿರಂತರವಾಗಿ ಭಾಗಿಯಾಗಿ ಕ್ರೀಡೆಯನ್ನು ಉತ್ತೇಜಿಸುವದು, ಕ್ರೀಡೆಗೆ ಆದ್ಯತೆ ಹಾಗೂ ಯುವಕರ ಬೆಳವಣಿಗೆಯ ಸಲುವಾಗಿ ವಿಶ್ವದಾದ್ಯಂತ ಒಲಂಪಿಕ್ ದಿನಾಚರಣೆಯನ್ನು ಹಮ್ಮಿ ಕೊಳ್ಳಲಾಗಿದೆ. ಇದೇ ಸಂಧರ್ಭದಲ್ಲಿ ಹಾಕಿ ಕೊಡಗು ಸಂಸ್ಥೆಯಿಂದ ತರಬೇತಿ ಪಡೆದಿರುವ 16 ವರ್ಷದ ವಯೋಮಿತಿಯ ಮಕ್ಕಳಿಂದ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಯಿಸ ಬೇಕೆಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆಯನ್ನು ಹಾಕಿ ಕೊಡಗು ಸಂಸ್ಥೆಯ ಜಿಲ್ಲಾಧ್ಯಕ್ಷರು ಹಾಗೂ ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಸಾಯಿ ಕೋಚ್ ಮೊಳ್ಳೇರ ಸುಬ್ಬಯ್ಯ, ಮಾಜಿ ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಬುಟ್ಟಿಯಂಡ ಚಂಗಪ್ಪ ಉಪಸ್ಥಿತರಿರುವರು ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕಳ್ಳಿಚಂಡ ಪ್ರಸಾದ್, ಮೇಕೆರಿರ ರವಿ ಪೆಮ್ಮಯ್ಯ, ನಿರ್ದೇಶಕಿ ಮಾಪಂಗಡ ಯಮುನಾ ಚಂಗಪ್ಪ ಉಪಸ್ಥಿತರಿದ್ದರು.