ಸೋಮವಾರಪೇಟೆ,ಅ.27: ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಓಬೀರಾಯನ ಕಾಲದಲ್ಲಿ ನೀಡಲಾಗಿರುವ ಬಂದೂಕುಗಳ ಬದಲಿಗೆ ಎ.ಕೆ. 47 ಗನ್‍ಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪೊಲೀಸರಿಗೆ ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ಕೊಡಗು ಪ್ರಜಾರಂಗ ಆಗ್ರಹಿಸಿದೆ. ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಜಾರಂಗದ ಜಿಲ್ಲಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ, ಹಳೆಯ ಕಾಲದ ಶಸ್ತ್ರಗಳನ್ನು ಕೊಟ್ಟು ಪೊಲೀಸರನ್ನು ಇಂದಿಗೂ ಶೋಷಿಸಲಾಗುತ್ತಿದೆ. ಇದನ್ನು ಹೋಗ ಲಾಡಿಸಿ ಅವರಲ್ಲೂ ಆತ್ಮಸ್ಥೈರ್ಯ ತುಂಬಲು ಪ್ರತಿ ಠಾಣೆಗೆ ಎ.ಕೆ. 47 ರೈಫಲ್, ಕಾನ್ಸ್‍ಟೇಬಲ್ ಗಳಿಗೆ ರಿವಾಲ್ವರ್ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ಈ ಹಿಂದೆ ಪೊಲೀಸ್ ಸಿಬ್ಬಂದಿಗಳು ವೇತನ ಹೆಚ್ಚಳ, ವಸತಿ ಸೌಕರ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅದನ್ನು ಇಲಾಖೆಯ ಮೇಲಧಿಕಾರಿ ಗಳಿಂದ ಹತ್ತಿಕ್ಕಲಾಯಿತು. ಕೊನೆಗೆ ಶೇ. 27ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿರುವದು ಸ್ವಾಗತಾರ್ಹ. ಅದರಂತೆ ಉಳಿದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸ ಬೇಕೆಂದು ಆಗ್ರಹಿಸಿದರು.

ಎಲ್ಲಾ ಪೊಲೀಸ್ ಠಾಣೆಗಳಿಗೂ ಈಗಿರುವ ಹಳೆಯ ಶಸ್ತ್ರಗಳ ಬದಲಿಗೆ ಎ.ಕೆ. 47ರಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು. ಈಗಾದಾಗ ಮಾತ್ರ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡಲು ಮಾನಸಿಕ ಧೈರ್ಯ ಬರುತ್ತದೆ ಎಂದ ವಿಠಲ್ ಗೌಡ, ಕರ್ತವ್ಯನಿರತ ಪೊಲೀಸರು ಮರಣವನ್ನಪ್ಪಿದರೆ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಸೈನಿಕರಿಗೆ ನೀಡುತ್ತಿರುವಂತೆ ಕ್ಯಾಂಟೀನ್ ಸೌಲಭ್ಯವನ್ನು ರಾಜ್ಯದ ಪೊಲೀಸರಿಗೂ ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು. ಪೊಲೀಸ್ ವಸತಿಗೃಹಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಅವರ ಮಕ್ಕಳಿಗೆ ಪದವಿವರೆಗಿನ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಬೇಕು. ಪೊಲೀಸರ ವೇತನವನ್ನು ತಕ್ಷಣ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದರು.

ಡಿವೈಎಸ್‍ಪಿ ರ್ಯಾಂಕ್‍ಗಿಂತ ಕೆಳದರ್ಜೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರಂತರ ಕಿರುಕುಳ ಅನುಭವಿಸುತ್ತಿದ್ದು, ಒತ್ತಡ ತಾಳಲಾರದೆ ರಾಜೀನಾಮೆ, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಪೊಲೀಸ್ ಇಲಾಖೆಯಲ್ಲಿ ಭ್ರಷ್ಟ ರಾಜಕಾರಣಿಗಳು, ಕ್ರಿಮಿನಲ್‍ಗಳ ಹಸ್ತಕ್ಷೇಪವನ್ನು ನಿಲ್ಲಿಸಬೇಕು. ಈ ಬಗ್ಗೆ ಸರ್ಕಾರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿರುವದಾಗಿ ವಿಠಲ್ ಅವರು ತಿಳಿಸಿದರು. ಗೋಷ್ಠಿಯಲ್ಲಿ ಕೊಡಗು ಪ್ರಜಾರಂಗದ ತಾಲೂಕು ಸಂಚಾಲಕ ಬಿ.ಎಸ್. ಸುರೇಶ್, ಜಿಲ್ಲಾ ಕಾರ್ಯದರ್ಶಿ ಕೆ.ಜಿ. ಆನಂದ್, ತಾಲೂಕು ಅಧ್ಯಕ್ಷ ಡಿ.ಎಂ. ಪೂವಯ್ಯ ಉಪಸ್ಥಿತರಿದ್ದರು.