ಸೋಮವಾರಪೇಟೆ, ಜೂ. 23: ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಿನ್ನೆ ದಿನ ಸೋಮವಾರಪೇಟೆಯಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿದ್ದ ಹಿಂದೂಪರ ಸಂಘಟನೆಗಳ ಮುಖಂಡರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿರುವ ಬ್ಲಾಕ್ ಕಾಂಗ್ರೆಸ್, ಈ ಸಂಬಂಧಿತ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ.

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಘಟನೆಯನ್ನೇ ದೊಡ್ಡದಾಗಿ ಬಿಂಬಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದರ ನೇತೃತ್ವವನ್ನು ವಹಿಸಿದ ಮುಖಂಡರ ಪ್ರಚೋದನೆಯಿಂದಲೇ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನೆಗೆ ಯಾವದೇ ಅನುಮತಿ ಪಡೆದಿಲ್ಲ. ಪ್ರತಿಭಟನೆಯ ಸಂದರ್ಭವೂ ಗಲಭೆ ನಡೆದಿದೆ. ನಂತರವೂ ಒಂದು ಕೋಮಿನ ವ್ಯಕ್ತಿಗಳ ಮೇಲೆ ಹಲ್ಲೆ ನಡೆದಿದೆ. ಇದಕ್ಕೆಲ್ಲಾ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರೇ ಕಾರಣರಾಗಿದ್ದಾರೆ. ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸದೇ ಮುಖಂಡರ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮನವಿಯಲ್ಲಿ ಒತ್ತಾಯಿಸಿದೆ.

ಮನವಿ ಸಲ್ಲಿಸಿದ ನಂತರ ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಪ್ರತಿಭಟನೆ ಸಂದರ್ಭ ಪೊಲೀಸ್ ಅಧಿಕಾರಿಯನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿರುವದು ಖಂಡನೀಯ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಯಾವದೇ ಧರ್ಮದವರು ಭಾಗಿಯಾಗಿದ್ದರೂ ಕಠಿಣ ಕಾನೂನು ಕ್ರಮ ಜರುಗಲೇಬೇಕು. ವೈಯುಕ್ತಿಕ ವಿಚಾರಕ್ಕೆ ಹಲ್ಲೆ ನಡೆದರೂ ಸಹ ಸಂಘಟನೆಗಳ ಪ್ರಮುಖರು ಪ್ರತಿಭಟನೆಯ ನೆಪವೊಡ್ಡಿ ಅಶಾಂತಿಯ ವಾತಾವರಣ ನಿರ್ಮಿಸಲು ಮುಂದಾಗುತ್ತಾರೆ. ಇಂತಹವರ ವಿರುದ್ಧ ಕ್ರಮ ಅನಿವಾರ್ಯ ಎಂದರು. ಗಲಭೆಗಳಿಗೆ ಸಂಬಂಧಿಸಿದಂತೆ ಅಮಾಯಕರ ವಿರುದ್ಧ ಮೊಕದ್ದಮೆ ದಾಖಲಾಗಬಾರದು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರುಗಳ ಮೇಲೆ ಮೊಕದ್ದಮೆ ದಾಖಲಿಸಬೇಕು. ರಾಜಕೀಯ ಲಾಭಕ್ಕೆ ಅಮಾಯಕ ಯುವಕರು ಬಲಿಯಾಗಬಾರದು ಎಂದು ಲೋಕೇಶ್ ಅಭಿಪ್ರಾಯಿಸಿದರು.

ಸೋಮವಾರಪೇಟೆಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜೀ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹಾಲೀ ಸಚಿವ ಸೀತಾರಾಂ ಅವರುಗಳ ಗಮನಕ್ಕೆ ತರಲಾಗಿದೆ. ಗೃಹ ಸಚಿವರಿಗೂ ಮಾಹಿತಿ ನೀಡಲಾಗಿದೆ. ಸೋಮವಾರಪೇಟೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸುವಂತೆ ಕೋರಲಾಗಿದೆ ಎಂದು ಲೋಕೇಶ್ ಹೇಳಿದರು.

ಟಿಪ್ಪು ಜಯಂತಿ ಗಲಭೆ ನಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಆಗಿಂದಾಗ್ಗೆ ಗಲಭೆಗಳು ನಡೆಯುತ್ತಿದ್ದು, ಜಿಲ್ಲಾಡಳಿತ ತಕ್ಷಣ ಮಧ್ಯೆಪ್ರವೇಶಿಸಿ ಶಾಂತಿಯ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಮಾಜಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ, ಸೀತಾರಾಂ ಅವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸ್ಥಾನ ನೀಡಿರುವದನ್ನು ಬ್ಲಾಕ್ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಲೋಕೇಶ್ ಇದೇ ಸಂದರ್ಭ ಹೇಳಿದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ವಕ್ತಾರ ಬಿ.ಬಿ. ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಮಹಿಳಾ ಕಾಂಗ್ರೆಸ್‍ನ ಶೀಲಾ ಡಿಸೋಜ ಅವರುಗಳು ಉಪಸ್ಥಿತರಿದ್ದರು.