ಮಡಿಕೇರಿ, ನ.25 : ಆರ್ಥಿಕ ಕ್ಷೇತ್ರದ ಬಗ್ಗೆ ಸಾಮಾನ್ಯ ಜ್ಞಾನವಿಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು ಯಾವದೇ ಪೂರ್ವಭಾವಿ ಸಿದ್ಧತೆಗಳಿಲ್ಲದೆ ದಿಢೀರಾಗಿ ನೋಟು ಗಳನ್ನು ನಿಷೇಧಿಸುವ ಮೂಲಕ ಜನ ಸಾಮಾನ್ಯರು ಬೀದಿ ಪಾಲಾಗುವಂತೆ ಮಾಡಿದ್ದಾರೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ದಿಢೀರಾಗಿ ನಿಷೇಧಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು. ತಾ. 28 ರಂದು ವಿರೋಧ ಪಕ್ಷಗಳು ಕರೆ ನೀಡಿರುವ ಭಾರತ್ ಬಂದ್‍ಗೆ ಬೆಂಬಲ ಸೂಚಿಸಿದರು. ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ ಮತ್ತು ಕೇಂದ್ರ ಸರ್ಕಾರದ ನಿರ್ಧಾರ ಬಂಡವಾಳ ಶಾಹಿಗಳ ಪರವಾಗಿದೆಯೆಂದು ಆರೋಪಿಸಿದ ಅವರು, ಕಪ್ಪುಹಣವನ್ನು ವಶಪಡಿಸಿ ಕೊಳ್ಳುವದಾದರೆ

(ಮೊದಲ ಪುಟದಿಂದ) ಎಲ್ಲಾ ದಿಕ್ಕುಗಳಿಗೆ ತಡೆಯನ್ನು ಒಡ್ಡುವ ಮೂಲಕ ದಿಟ್ಟ ಕ್ರಮವನ್ನು ಕೈಗೊಳ್ಳÀಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. ರಾತೋ ರಾತ್ರಿ ಕಪ್ಪು ಹಣ ಚಿನ್ನ ಮತ್ತು ವಜ್ರದ ರೂಪದಲ್ಲಿ ಶೇಖರಣೆಯಾಗಿದ್ದು, ಟ್ರಸ್ಟ್‍ಗಳ ಮೂಲಕವೂ ಹಣ ಚಲಾವಣೆಯಾಗಿದೆ. ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಮಠಮಾನ್ಯಗಳು, ಮಂದಿರಗಳಲ್ಲಿ ಹಣವನ್ನು ತೊಡಗಿಸಲಾಗುತ್ತಿದೆ. ಕಪ್ಪು ಹಣ ಹೊಂದಿದವರು ಯಾವದೇ ತೊಂದರೆಯನ್ನು ಅನುಭವಿಸುತ್ತಿಲ್ಲವೆಂದು ಅಭಿಪ್ರಾಯಪಟ್ಟ ಅಮಿನ್ ಮೊಹಿಸಿನ್, ಶೇ.90 ರಷ್ಟು ಬಡ ವರ್ಗ ಬೀದಿ ಪಾಲಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದೇಶದಲ್ಲಿ ಸುಮಾರು 600 ಮಂದಿ ಕಪ್ಪು ಹಣ ಹೊಂದಿದ್ದಾರೆ ಎಂದು ಘೋಷಿಸಿರುವ ಕೇಂದ್ರ ಸರ್ಕಾರ ಇವರುಗಳ ಹೆಸರನ್ನು ಬಹಿರಂಗಪಡಿಸಿ ಕಪ್ಪು ಹಣವನ್ನು ವಶಕ್ಕೆ ಪಡೆಯಲಿ ಎಂದು ಅವರು ಒತ್ತಾಯಿಸಿದರು.

ಪ್ರಧಾನ ಮಂತ್ರಿ ಮೋದಿ ಅವರ ದಿಢೀರ್ ನಿರ್ಧಾರದಿಂದಾಗಿ ಸಣ್ಣ ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರ ಚಟುವಟಿಕೆಗಳು ಸ್ಥಗಿತಗೊಂಡಿದೆ. ಬಿಗ್ ಬಜಾರ್‍ಗಳಿಗೆ 500 ಹಾಗೂ 1000 ರೂ. ನೋಟುಗಳ ಬದಲಾವಣೆಗೆ ಅವಕಾಶ ನೀಡಿದ ಸರ್ಕಾರ ಸಹಕಾರ ಸಂಘಗಳಿಗೆ ಈ ಅವಕಾಶವನ್ನು ಯಾಕೆ ನೀಡಿಲ್ಲವೆಂದು ಅಮಿನ್ ಮೊಹಿಸಿನ್ ಪ್ರಶ್ನಿಸಿದರು. ಸರ್ಕಾರದ ಈ ನಡೆಗಳು ಬಂಡವಾಳಶಾಹಿಗಳ ಪರ ಇರುವದನ್ನು ಸಾಬೀತುಪಡಿಸುತ್ತಿದೆ ಎಂದು ಆರೋಪಿಸಿದರು.

ಖಾತೆದಾರರಿಗೆ ಹಣ ಪಡೆಯದಂತೆ ನಿರ್ಬಂಧ ಹೇರಿರುವ ದೇಶವೆಂದರೆ ಅದು ಭಾರತ ಮಾತ್ರ ಎಂದು ವ್ಯಾಖ್ಯಾನಿಸಿದ ಅಮಿನ್ ಮೊಹಿಸಿನ್, ನೋಟುಗಳ ನಿಷೇಧದಿಂದ ಅನೇಕರು ಸಾವನ್ನಪ್ಪಿದ್ದು, ಇದು ವಿಷಾದಕರವೆಂದರು. ಆ್ಯಪ್‍ನ ಮೂಲಕ ಪ್ರಧಾನಿ ಮೋದಿಯವರ ಕ್ರಮಕ್ಕೆ 5 ಲಕ್ಷ ಮಂದಿಯ ಬೆಂಬಲವಿದೆಯೆಂದು ಪ್ರತಿಬಿಂಬಿಸಲಾಗುತ್ತಿದೆಯಾದರೂ ಈ ಬೆಂಬಲ ಬಿಜೆÀಪಿ ಪಕ್ಷದ ಕಾರ್ಯಕರ್ತರಿಂದ ವ್ಯಕ್ತವಾಗಿದೆಯೇ ಹೊರತು, ಅಂತರ್ಜಾಲದ ಅರಿವಿಲ್ಲದ ಜನಸಾಮಾನ್ಯರಿಂದ ಅಲ್ಲವೆಂದು ಅವರು ತಿಳಿಸಿದರು.

ಸರ್ಕಾರದ ಕ್ರಮದ ವಿರುದ್ಧ ವಿರೋಧ ಪಕ್ಷಗಳು ಕರೆ ನೀಡಿರುವ ನ.28 ರ ಭಾರತ ಬಂದ್‍ಗೆ ಎಸ್‍ಡಿಪಿಐ ಪಕ್ಷ ಸಂಪೂರ್ಣವಾಗಿ ಬೆಂಬಲವನ್ನು ನೀಡಲಿದೆಯೆಂದು ಅಮಿನ್ ಮೊಹಿಸಿನ್ ಸ್ಪಷ್ಟಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ, ಐಗೂರಿನ ಮಸೀದಿಯಲ್ಲಿ ಕುರಾನ್‍ಗೆ ಬೆಂಕಿ ಹಚ್ಚಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರಲ್ಲದೆ, ಪೊಲೀಸರ ನಿಷ್ಕ್ರೀಯತೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದರು.

ಜಿಲ್ಲೆಯ ಶಾಸಕರು ಹಾಗೂ ಸಂಸದರು ಒಂದೇ ವರ್ಗಕ್ಕೆ ಸೀಮಿತವಾದಂತೆ ವರ್ತಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆ ಪಾವತಿಸಿದ ತೆರಿಗೆಯಿಂದ ಶಾಸಕರುಗಳು ವೇತನ ಹಾಗೂ ಸಕಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬ ಪ್ರಜೆಯ ಕಷ್ಟ ನಷ್ಟಗಳಿಗೆ ಸ್ಪಂದಿಸುವ ಗುಣವನ್ನು ಜನಪ್ರತಿನಿಧಿಗಳು ಹೊಂದಿರಬೇಕೆಂದು ಅಭಿಪ್ರಾಯಪಟ್ಟ ಅಬ್ದುಲ್ ಅಡ್ಕಾರ್, ಐಗೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಪೊಲೀಸ್ ಇಲಾಖೆ ರಾಜಕೀಯ ಪ್ರಭಾವಕ್ಕೆ ಮಣಿದಿರುವ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ ಅವರು ತಪ್ಪಿತಸ್ತರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಸಮಿತಿ ಸದಸ್ಯ ನೂರುದ್ದೀನ್ ಮಾತನಾಡಿ, ಅಲ್ಪ ಸಂಖ್ಯಾತರ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನ.30 ರಂದು ಗಾಂಧಿ ಮಂಟಪದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸುವದಾಗಿ ತಿಳಿಸಿದರು.