ಕುಶಾಲನಗರ, ಆ. 12: ಹಾರಂಗಿ ಅಣೆಕಟ್ಟೆ ಪ್ರದೇಶದ ಉದ್ಯಾನವನಕ್ಕೆ ಮೈಸೂರು ಕೆಆರ್‍ಎಸ್ ಮಾದರಿಯ ಭದ್ರತೆ ಕಲ್ಪಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಹಾರಂಗಿ ಉದ್ಯಾನವನ ಲೋಕಾರ್ಪಣೆಗೊಂಡ ಬೆನ್ನಲ್ಲೇ ಪ್ರವಾಸಿಗರ ಆಗಮನ ಪ್ರಾರಂಭ ಗೊಂಡು ಇದೀಗ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರೊಂದಿಗೆ ಸಾಮಾನ್ಯ ದಿನಗಳಲ್ಲಿ ಅಂದಾಜು 500 ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದರೆ ವಾರಾಂತ್ಯಗಳಲ್ಲಿ ಸರಾಸರಿ 3 ರಿಂದ 4 ಸಾವಿರ ಪ್ರವಾಸಿಗರು ಹಾರಂಗಿ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹಾರಂಗಿ ಅಣೆಕಟ್ಟೆ ಉಸ್ತುವಾರಿ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಜಲಾಶಯದ ಭದ್ರತೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಾಮಗ್ರಿ ಸರಂಜಾಮುಗಳ ಪರಿಶೀಲನೆ ನಡೆಸಿ ಒಳ ಬಿಡಬೇಕಾಗಿದೆ. ಪೊಲೀಸರ ಕೊರತೆಯಿಂದ ಈ ಕಾರ್ಯಕ್ಕೆ ಹಿನ್ನಡೆ ಉಂಟಾಗುವದರೊಂದಿಗೆ ಭದ್ರತಾ ಲೋಪ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈಗಾಗಲೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿಗಮದ ಮೂಲಕ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ನಾಗರಾಜ್ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಅಣೆಕಟ್ಟೆಗಳಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಪೊಲೀಸ್ ಪಡೆಯ ನೇಮಕಗೊಳಿಸಲು ಈ ಹಿಂದೆ ಆದೇಶ ಹೊರಡಿಸಿದ್ದರೂ ಇದುವರೆಗೆ ಈ ಕೆಲಸ ನಡೆದಿಲ್ಲ. ಪ್ರತಿ ಅಣೆಕಟ್ಟೆ ಭದ್ರತೆಗೆ 120 ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡುವ ಬಗ್ಗೆ ಈ ಹಿಂದಿನ ಸರಕಾರ ನಿರ್ಧಾರ ಕೈಗೊಂಡಿತ್ತು. ಕುಶಾಲನಗರದ ಹಾರಂಗಿ, ಗೊರೂರು, ಹೇಮಾವತಿ ಅಣೆಕಟ್ಟೆಗಳಿಗೆ ಈ ರೀತಿಯ ಭದ್ರತೆ ಕಲ್ಪಿಸಲು ಸರಕಾರ ಮುಂದಾಗಿತ್ತು. ಆದರೆ ಹಾರಂಗಿ ಅಣೆಕಟ್ಟೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೂಡಿಲ್ಲ. ಇದೀಗ ಪ್ರವಾಸಿಗರನ್ನು ಒಳಬಿಡುವ ನಿರ್ಧಾರದ ಹಿನ್ನೆಲೆಯಲ್ಲಿ ಈ ಭದ್ರತೆಯ ಅಗತ್ಯತೆ ಇರುವದಾಗಿ ನಿಗಮದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಹಾರಂಗಿ ಉದ್ಯಾನವನವನ್ನು ಮೈಸೂರು ಕೆಆರ್‍ಎಸ್ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಎಲ್ಲಾ ರೀತಿಯ ಕ್ರಮವನ್ನು ನಿಗಮ ಕೈಗೊಳ್ಳಲಿದೆ ಎಂದು ತಿಳಿಸಿರುವ ಇಂಜಿನಿಯರ್ ನಾಗರಾಜು, ಉದ್ಯಾನವನದ ಸನಿಹದಲ್ಲಿ 2.49 ಕೋಟಿ ರೂ. ಗಳ ವೆಚ್ಚದಲ್ಲಿ ಬೃಹತ್ ಸಂಗೀತ ಕಾರಂಜಿ ಪ್ರಾರಂಭಗೊಳ್ಳಲಿದೆ. ಈ ಯೋಜನೆಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಡಿಸೆಂಬರ್ ಅಂತ್ಯದಲ್ಲಿ ಪ್ರವಾಸಿಗರಿಗೆ ಈ ಯೋಜನೆ ಮನರಂಜನೆ ನೀಡಲಿದೆ ಎಂದಿದ್ದಾರೆ.

ಜರ್ಮನ್ ತಂತ್ರಜ್ಞಾನದಲ್ಲಿ ನಿರ್ಮಾಣಗೊಳ್ಳಲಿರುವ ಈ ಸಂಗೀತ ಕಾರಂಜಿಯನ್ನು ಏಕಕಾಲದಲ್ಲಿ 500 ಮಂದಿ ವೀಕ್ಷಿಸಲು ಎಲ್ಲಾ ರೀತಿಯ ಅನುಕೂಲ ಒದಗಲಿದೆ. ಜರ್ಮನ್ ತಂತ್ರಜ್ಞರು ನಿರ್ಮಿಸಲಿರುವ ಈ ಯೋಜನೆ ಪ್ರಸಕ್ತ ಗುಜರಾತ್‍ನಲ್ಲಿ ನಿರ್ಮಾಣಗೊಂಡಿದ್ದು, ದಕ್ಷಿಣ ಭಾರತದ ಪ್ರಪ್ರಥಮ ಅಂತರ ರಾಷ್ಟ್ರೀಯ ತಂತ್ರಜ್ಞಾನ ಒಳಗೊಂಡ ಸಂಗೀತ ಕಾರಂಜಿ ಇದಾಗಲಿದೆ ಎಂದಿದ್ದಾರೆ.

ಈ ಕಾರಂಜಿ ಯೋಜನೆಯ ನಿರ್ವಹಣೆಯನ್ನು ನಿರ್ಮಾಣ ಸಂಸ್ಥೆಯೇ 5 ವರ್ಷಗಳ ಕಾಲ ಪೂರೈಸಲಿದೆ ಎಂದು ತಿಳಿಸಿದ್ದಾರೆ. ಈ ತಿಂಗಳ 28 ರಂದು ಕಾಮಗಾರಿಗೆ ಭೂಮಿಪೂಜೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾರಂಗಿ ಅಣೆಕಟ್ಟೆಯ ಜಲಾಶಯದ ಆವರಣದಲ್ಲಿರುವ ಉದ್ಯಾನವನಕ್ಕೆ ಪ್ರಸಕ್ತ ಪ್ರವಾಸಿಗರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕ ವೀಕ್ಷಣೆಗೆ ಮುಂದಿನ ದಿನಗಳಲ್ಲಿ ಪ್ರವೇಶದರ ನಿಗದಿಪಡಿಸಲು ನಿಗಮಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಇದರೊಂದಿಗೆ ವಾಹನ ನಿಲುಗಡೆಗೊಳಿಸಲು ದರ ನಿಗದಿಯೊಂದಿಗೆ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ನಿಗಮ ಕಾರ್ಯಯೋಜನೆ ರೂಪಿಸಲಿದೆ ಎಂದರು. ಪ್ರವೇಶದರ ವಯಸ್ಕರಿಗೆ 10 ರೂ.ಗಳು, ಮಕ್ಕಳಿಗೆ 5 ರೂ.ಗಳಂತೆ ನಿಗದಿಪಡಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ನಾಗರಾಜ್ ತಿಳಿಸಿದ್ದಾರೆ.

- ಚಂದ್ರಮೋಹನ್