ಮಡಿಕೇರಿ, ಜು.10: ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ಜೀಪ್ ಗಳಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಹೆಬ್ಬೆಟ್ಟಗೇರಿ, ದೇವಸ್ತೂರು ಮತ್ತು ಕಾಲೂರು ಗ್ರಾಮಸ್ಥರು ಕೆ.ನಿಡುಗಣೆ ಗ್ರಾ.ಪಂ. ಬಳಿ ಪ್ರತಿಭಟನೆ ನಡೆಸಿದರು.

ಮಾಂದಲ್‍ಪಟ್ಟಿ ಗೇಟ್‍ವರೆಗೆ ಎಲ್ಲಾ ವಾಹನಗಳು ತೆರಳಲು ಸಾಧ್ಯವಿದ್ದರೂ, ಸುಮಾರು 30ರಿಂದ 40 ಜೀಪ್‍ಗಳನ್ನು ಅಬ್ಬಿಫಾಲ್ಸ್ ಮಾಂದಲ್‍ಪಟ್ಟಿ ಜಂಕ್ಷನ್‍ನಲ್ಲಿ ನಿಲ್ಲಿಸಿಕೊಂಡು ಪ್ರವಾಸಿಗರನ್ನು ಬೆದರಿಸಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಈ ಹಿಂದೆ ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಅಲ್ಲದೆ, ಹಣದಾಸೆಗೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದ್ದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಇದರಿಂದ ಜಂಕ್ಷನ್‍ನಲ್ಲಿ ನಿಲುಗಡೆಗೊಳ್ಳುತ್ತಿದ್ದ ಜೀಪ್‍ಗಳು ಕಾಣೆಯಾಗಿದ್ದವು. ಆದರೆ ಮತ್ತೆ ಜೀಪ್ ಚಾಲಕರು ಪ್ರವಾಸಿಗರನ್ನು ಕರೆದೊಯ್ಯುತ್ತಿರುವದಲ್ಲದೆ, ಅಪಘಾತವೊಂದು ಸಂಭವಿಸಿದೆ ಎನ್ನಲಾಗಿದೆ. ಈ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ನೀಡಲು ಠಾಣೆಗೆ ತೆರಳಿದ ಸಂದರ್ಭ ಪೊಲೀಸರೇ ಸ್ಥಳಕ್ಕೆ ತೆರಳಿದ್ದಾರೆ ಎಂದು ಠಾಣೆಯಲ್ಲಿದ್ದ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ಬಳಿಕ ಕೆ.ನಿಡುಗಣೆ ಗ್ರಾ.ಪಂ. ಬಳಿಯ ಜಂಕ್ಷನ್‍ಗೆ ತೆರಳಿದ ಗ್ರಾಮಸ್ಥರು, ಪ್ರವಾಸಿಗರ ವಾಹನವನ್ನು ಜಂಕ್ಷನ್‍ನಲ್ಲಿ ನಿಲುಗಡೆಗೊಳಿಸದಂತೆ ಸೂಚಿಸಿ ರಸ್ತೆ ಬದಿ ನಿಂತಿದ್ದ ಪ್ರವಾಸಿಗರ ವಾಹನವನ್ನು ತೆರವುಗೊಳಿಸಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಜೀಪ್ ಚಾಲಕರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು. ಆದರೆ ತಡವಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವಿಯನ್ನೂ ಆಲಿಸದೆ, ಗ್ರಾಮಸ್ಥರನ್ನೇ ಸ್ಥಳದಿಂದ ತೆರಳುವಂತೆ ಸೂಚಿಸಿದರು. ನಮಗೆ ಹೇಗೆ ಕೆಲಸ ಮಾಡಬೇಕೆಂದು ಗೊತ್ತಿದೆ. ನೀವು ಹೇಳಬೇಡಿ. ಸ್ಥಳದಿಂದ ತೆರಳದಿದ್ದಲ್ಲಿ ಬಂಧಿಸುವೆವು ಎಂದು ಎಚ್ಚರಿಕೆಯನ್ನು ಪೊಲೀಸರು ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಗ್ರಾಮಸ್ಥರ ಸಮಸ್ಯೆಯನ್ನು ಪೊಲೀಸರು ಆಲಿಸದಿದ್ದುದು ವಿಪರ್ಯಾಸ.

ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ಜೀಪ್‍ಗಳಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಈಗಾಗಲೇ ಜೀಪ್‍ಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಪ್ರವಾಸಿಗರನ್ನು ಬೆದರಿಸಿ ಕಳುಹಿಸುವ ಮೂಲಕ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಮಾಧ್ಯಮಗಳ ಮೂಲಕ ತಮಗಾಗುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಮತ್ತೆ ಜೀಪ್ ಚಾಲಕರು ಎಂದಿನಂತೆ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ದರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು. ಆದರೆ ಸ್ಥಳಕ್ಕಾಗಮಿಸಿದ ಪೊಲೀಸರು ನಮ್ಮ ಸಮಸ್ಯೆಗಳನ್ನೂ ಆಲಿಸದೆ ನಮ್ಮನ್ನೇ ಸ್ಥಳದಿಂದ ತೆರಳುವಂತೆ ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆಯೂ ದಂಧೆಯಲ್ಲಿ ಭಾಗಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ವೈಟ್‍ಬೋರ್ಡ್ ಜೀಪ್ ಗಳಲ್ಲಿಯೂ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದ್ದು, ಈ ಬಗೆಯೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಜಂಕ್ಷನ್‍ನಲ್ಲಿ ನಿಲುಗಡೆಗೊಳ್ಳುವ ಜೀಪ್‍ಗಳನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರಲ್ಲದೆ, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಜೀಪ್ ಚಾಲಕ ಅಯ್ಯಪ್ಪ, ನಾವು ಹೊಟ್ಟೆಪಾಡಿಗಾಗಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದೇವೆ. ದನಕರುಗಳನ್ನು ಕೊಲ್ಲುವಷ್ಟು ಕಟುಕರು ನಾವಲ್ಲ. ಕೆಲವು ಜೀಪ್ ಚಾಲಕರು ವೇಗವಾಗಿ ಚಲಿಸುತ್ತಿದ್ದು, ಇದನ್ನು ಸರಿಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು. ಗ್ರಾಮಸ್ಥರಾದ ಎ.ಟಿ. ಮಾದಪ್ಪ, ಕವನ್, ಮೋಹನ್, ಕೀರ್ತನ್ ಮತ್ತಿತರರಿದ್ದರು.