ಮಡಿಕೇರಿ, ಸೆ.29 : ಕಾಫಿ ಪೇಯ ಸೇವನೆಗೆ ಉತ್ತೇಜನ, ಅದರ ಪ್ರಯೋಜನ ಮತ್ತು ಕಾಫಿ ತಯಾರಿಸುವ ವಿಧಾನದ ಕುರಿತು ಪ್ರವಾಸಿಗರಿಗೆ ಹಾಗೂ ಸಾರ್ವಜನಿಕ ರಿಗೆ ಜಾಗೃತಿ ಮೂಡಿಸುವದಕ್ಕಾಗಿ ವಿಶ್ವ ಕಾಫಿ ದಿನವಾದ ಅ.1 ರಂದು ಪ್ರವಾಸಿ ತಾಣ ದುಬಾರೆಯಲ್ಲಿ ಕಾಫಿ ದಿನವನ್ನು ಆಚರಿಸಲಾಗುವದೆಂದು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ, ಕಾಫಿ ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕಾಫಿ ದಿನವನ್ನು ಆಚರಿಸ ಲಾಗುತ್ತಿದ್ದು, ಸುಮಾರು 3 ಸಾವಿರ ಪ್ರವಾಸಿಗರಿಗೆ ಉಚಿತವಾಗಿ ಕಾಫಿ ನೀಡುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.

ವಿಶ್ವ ಕಾಫಿ ಸಂಸ್ಥೆ ಅ.1ನ್ನು ವಿಶ್ವ ಕಾಫಿ ದಿನವೆಂದು 2015 ರಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಕಾಫಿ ಜಾಗೃತಿ ಸಂಘದ ಮೂಲಕ ಕಾಫಿ ದಿನವನ್ನು ಆಚರಿಸ ಲಾಗುತ್ತಿದೆ. ವಿಶ್ವ ಕಾಫಿ ಸಂಸ್ಥೆಯಲ್ಲಿ ಕಾಫಿ ಬೆಳೆÉಯುವ 77 ದೇಶಗಳ ಸದಸ್ಯರಿದ್ದು, ಕಾಫಿ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಕೊಡಗಿನಲ್ಲಿ ಸಂಘ 2002ರಲ್ಲಿ ಪ್ರಾರಂಭವಾಗಿದ್ದು, ಕಾಫಿ ಸೇವನೆ ಮತ್ತು ತಯಾರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಾ ಬರಲಾಗಿದೆ ಎಂದು ಚಿತ್ರಾ ಸುಬ್ಬಯ್ಯ ತಿಳಿಸಿದರು. ದೇಶದ ಜನತೆ ಮತ್ತು ಸೇನಾ ಕ್ಷೇತ್ರ ಕಾಫಿಯನ್ನು ಬಳಸಿದರೆ, ಇಲ್ಲಿ ಬೆಳೆಯುವ ಕಾಫಿ ಇಲ್ಲಿಗೇ ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಎಲ್ಲರೂ ಕಾಫಿಯನ್ನು ಸೇವಿಸುವಂತೆ ಕರೆ ನೀಡಿದರು.

ಖಜಾಂಚಿ ಭಾವನಾ ಪ್ರವೀಣ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕೊಡಗು ಜಿಲ್ಲೆಗೆ ಪ್ರತಿವರ್ಷ 40 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದು, ಇವರಿಗೆ ರುಚಿಕರವಾದ ಕಾಫಿಯನ್ನು ನೀಡುವ ಮೂಲಕ ಕಾಫಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆಯೆಂದು ತಿಳಿಸಿದರು. ಅ.1 ರಂದು ದುಬಾರೆ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾಧಿಕಾರಿಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿ ದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ಅನಿತಾ ನಂದ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಫಿ ಕಾಯ್ದೆ ಬಗ್ಗೆ ಸ್ಪಷ್ಟತೆ ಇಲ್ಲವೆಂದು ಅಭಿಪ್ರಾಯ ಪಟ್ಟರು. ಈ ಕಾಯ್ದೆ ಕುರಿತು ಬೆಳೆಗಾರರಿಗೆ ಸೂಕ್ತ ಮಾಹಿತಿಗಳು ಲಭ್ಯವಾಗಿಲ್ಲವೆಂದು ತಿಳಿಸಿದ ಅವರು, ಕಾಫಿ ತೋಟದ ನೋಂದಾವಣೆ ಮತ್ತು ತೋಟಗಳನ್ನು ಪರಿಶೀಲಿಸಲು ಕಾಫಿ ಮಂಡಳಿಗೆ ನೀಡಿರುವ ಅಧಿಕಾರದ ಅರ್ಥವೇನೆಂದು ಪ್ರಶ್ನಿಸಿದರು.

ಕೇಂದ್ರದ ವಾಣಿಜ್ಯ ಸಚಿವಾಲಯ ಕಾಫಿ ಬೆಳೆÉಗಾರರ ಒಪ್ಪಿಗೆಯನ್ನು ಪಡೆದು ಕಾಯ್ದೆ ಜಾರಿಗೆ ಮುಂದಾಗ ಬೇಕೆಂದು ಒತ್ತಾಯಿಸಿದರು. ಕಾಫಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕಾಫಿ ಬೆಳೆಗಾರರಿಗೆ ನೀಡುವದು ಸ್ವಾಗತಾರ್ಹ ವಾದರೂ ಗೊಂದಲಗಳ ನಿವಾರಣೆಗೆ ಸಂಸದ ಪ್ರತಾಪ ಸಿಂಹ, ಶಾಸಕ ದ್ವಯರಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು ಪ್ರಯತ್ನಿಸಬೇಕೆಂದು ಅನಿತಾ ನಂದ ಒತ್ತಾಯಿಸಿದರು.