ಸಿದ್ದಾಪುರ, ಜೂ. 8: ಜಿಲ್ಲೆಯಲ್ಲಿ ಎಲ್ಲಾ ಮಳೆಗಾಲದಲ್ಲೂ ನದಿ ದಡದಲ್ಲಿ ಪ್ರವಾಹ ಉಂಟಾಗುವದು ಸಾಮಾನ್ಯವಾಗಿದೆ. ಅದರಲ್ಲೂ ಸಿದ್ದಾಪುರ ಸಮೀಪದ ಕರಡಿಗೋಡು, ಗುಹ್ಯ ಗ್ರಾಮದ ನದಿ ದಡದ ಜನತೆ ವರ್ಷಂಪ್ರತಿ ಪ್ರವಾಹದಿಂದ ತತ್ತರಿಸಿ, ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವದು ಸಾಮಾನ್ಯವಾಗಿದೆ. ಪ್ರವಾಹ ಕಡಿಮೆಯಾದ ಕೂಡಲೇ ಮತ್ತದೇ ಬದುಕಿಗೆ ಮರಳುವ ಬಡಪಾಯಿಗಳು ಮತ್ತೊಂದು ಮಳೆಗಾಲ ಬಂತೆಂದರೆ ಬದುಕಿಗೆ ಕಾರ್ಮೋಡ ಕವಿದಂತೆ ಎಂದು ಭಾವಿಸುತ್ತಾರೆ.

ಈವರೆಗೂ ನದಿ ದಡದಲ್ಲಿ ಬಿದಿರುಗಳ ಆಧಾರದಿಂದಾಗಿ ಮಣ್ಣು ಕುಸಿತ ಕಡೆಮೆಯಾಗಿತ್ತು. ಆದರೆ ಇದೀಗ ನದಿ ದಡದ ಬಿದಿರುಗಳು ಸಂಪೂರ್ಣವಾಗಿ ಒಣಗಿಹೋಗಿದ್ದು, ಹೊಳೆ ಬದಿಯ ನಿವಾಸಿಗಳ ಮನೆಗೆ ಆಧಾರವಿಲ್ಲದಂತಾಗಿದೆ. ಮಾತ್ರವಲ್ಲದೇ ಈಗಾಗಲೇ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಅಪಾಯದ ಅಂಚಿನಲ್ಲಿದೆ. ಕಳೆದ ಮಳೆಗಾಲದ ಪ್ರವಾಹದಲ್ಲಿ ಬಹುತೇಕ ಬಿದಿರಿನ ಗುಡ್ಡೆಗಳು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದು, ಹಲವೆಡೆ ಈಗಾಗಲೇ ಮಣ್ಣು ಕುಸಿದಿದೆ.

ಪ್ರಮುಖವಾಗಿ ಸಿದ್ದಾಪುರದ ಗುಹ್ಯ, ಕರಡಿಗೋಡು, ನೆಲ್ಲಿಹುದಿಕೇರಿಯ ಬರಡಿ, ಬೆಟ್ಟದಕಾಡು ಮುಂತಾದ ಪ್ರÀದೇಶಗಳಲ್ಲಿ ವರ್ಷಂಪ್ರತಿ ಪ್ರವಾಹ ಉಂಟಾಗುತ್ತಿದ್ದು, ಅಲ್ಲಿನ ನಿವಾಸಿಗಳ ಜೀವಕ್ಕೆ ಸಂರಕ್ಷಣೆ ಇಲ್ಲದಂತಾಗಿದೆ.

ನದಿ ದಡದಲ್ಲಿ ಸೂರು ಕಟ್ಟಿಕೊಂಡು ವಾಸಿಸುತ್ತಿರುವದು ಹೆಚ್ಚಾಗಿ ಕಡು ಬಡ ವರ್ಗದ ಜನರೇ ಆಗಿರುವದರಿಂದ ಸ್ವಂತ ಜಾಗ ಖರೀದಿಸಿ ಮನೆ ಕಟ್ಟಲು ಅಶಕ್ತರಾಗಿರಾಗಿದ್ದಾರೆ.

ಹೀಗಾಗಿ ಬೇರೆ ಮಾರ್ಗವಿಲ್ಲದೇ ನದಿ ದಡದಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದಾಗಿದೆ. ಮಳೆಗಾಲದ ಪ್ರವಾಹಕ್ಕೆ ತಮ್ಮ ಮನೆಗಳಿಗೆ ನೀರು ನುಗ್ಗುವ ಸಂದರ್ಭದಲ್ಲಿ ಮನೆಯ ವಸ್ತುಗಳನ್ನು ತೆಗೆದು ಗಂಜಿ ಕೇಂದ್ರಕ್ಕೆ ತೆರಳುವ ಮಂದಿ, ಪ್ರವಾಹದ ಬಳಿಕ ಮತ್ತದೇ ಜೀವನಕ್ಕೆ ಮರಳಬೇಕಾಗಿದೆ.

ಕೇವಲ ಪ್ರವಾಹದ ಸಂದರ್ಭ ಸ್ಥಳಕ್ಕಾಗಮಿಸುವ ಜನಪ್ರತಿನಿಧಿಗಳು ಭರವಸೆಯನ್ನಿತ್ತು ತೆರಳುತ್ತಿದ್ದು, ನದಿ ದಡದ ಗ್ರಾಮಸ್ಥರಿಗೆ ಸುರಕ್ಷಿತವಾಗಿ ವಾಸಿಸಲು ಒಂದು ಶಾಶ್ವತ ಪ್ರದೇಶವನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನದಿ ದಡದಲ್ಲಿ ವಾಸಿಸುವ ಬಡ ಜನರ ಜೀವನ ನಿತ್ಯ ಸಮಸ್ಯೆಯ ಗೂಡಾಗಿದ್ದು, ಇದೀಗ ನಿವಾಸಿಗಳು ಮತ್ತೊಂದು ಪ್ರವಾಹದ ಭೀತಿಯನ್ನು ಎದುರಿಸಬೇಕಿದೆ. ನದಿ ದಡದ ನಿವಾಸಿಗಳು ನಿವೇಶನ ಕೋರಿ ಹಲವಾರು ಬಾರಿ ಗ್ರಾ.ಪಂ.ಗೆ ಅರ್ಜಿಗಳನ್ನು ನೀಡಿ ವರ್ಷಗಳೇ ಕಳೆದರೂ ಈವರೆಗೂ ಯಾವದೇ ಪ್ರಯೋಜನವಾಗಲಿಲ್ಲ.

ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದಲ್ಲಿ ಏಕರೆಗಟ್ಟಲೆ ಸರಕಾರಿ ಜಾಗವಿದ್ದು, ಜಿಲ್ಲಾಡಳಿತ ಒತ್ತುವರಿ ಜಾಗವನ್ನು ತೆರವುಗೊಳಿಸಿ ನದಿ ದಡದಲ್ಲಿ ವಾಸಿಸುವ ಬಡಪಾಯಿಗಳಿಗೆ ನೀಡಲು ಮುಂದಾಗಬೇಕಿದೆ. ದುರಂತ ಸಂಭವಿಸುವ ಮುಂಚಿತವಾಗಿ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ನದಿ ದಡದ ಅಪಾಯದ ಅಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಸುರಕ್ಷಿತ ಪ್ರದೇಶದಲ್ಲಿ ನಿವೇಶನ ಒದಗಿಸಿಕೊಡಬೇಕಾಗಿದೆ.