ಪೊನ್ನಂಪೇಟೆ, ಸೆ. 22: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ 14 ವರ್ಷದೊಳಗಿನ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲಾ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಇದುವರೆಗೂ ನಿರಂತರವಾಗಿ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಗಮನ ಸೆಳೆಯುತ್ತಿದ್ದ ಇದೇ ಶಾಲೆಯ ಬಾಲಕಿಯರ ಹಾಕಿ ತಂಡಕ್ಕೆ ಈ ಬಾರಿ ಹಿನ್ನಡೆಯಾಗಿದೆ. ಬದಲಿಗೆ ಬಾಲಕರ ತಂಡ ಸಾಧನೆಗೈದಿದ್ದು, ಇದೇ ಪ್ರಥಮ ಬಾರಿಗೆ ವಿಭಾಗೀಯ ಮಟ್ಟಕ್ಕೆ ಅರ್ಹತೆ ಗಿಟ್ಟಿಸಿ ಭರವಸೆ ಮೂಡಿಸಿದೆ.

ಬುಧವಾರ ನಡೆದ ಪ್ರಾಥಮಿಕ ಶಾಲಾ ವಿಭಾಗದ 14 ವರ್ಷದೊಳಗಿನ ಬಾಲಕರ ಹಾಕಿ ಪಂದ್ಯಾವಳಿಯ ಫೈನಲ್ಸ್ ಪಂದ್ಯದಲ್ಲಿ ನೇರವಾಗಿ ಅರ್ಹತೆ ಪಡೆದ ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನೊಳಗೊಂಡ ವೀರಾಜಪೇಟೆ ತಾಲೂಕು ತಂಡ ಸೋಮವಾರಪೇಟೆ ತಾಲೂಕು ತಂಡವನ್ನು 7-0 ಗೋಲುಗಳಿಂದ ಮಣಿಸಿ ಪ್ರಥಮ ಸ್ಥಾನ ಪಡೆಯುವದ ರೊಂದಿಗೆ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು. ತಂಡದ ಉಮೇಶ್ 6 ಗೋಲುಗಳನ್ನು ದಾಖಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ವಿಶೇಷವಾಗಿ ಗಮನ ಸೆಳೆದರು. ಉಳಿದಂತೆ ಎನ್.ಡಿ. ತಿಮ್ಮಯ್ಯ ಗೋಲೊಂದನ್ನು ದಾಖಲಿಸಿ ತಂಡದ ಅಂತರ ಹೆಚ್ಚಿಸಿದರು. ಇದಕ್ಕೂ ಮೊದಲೂ ಸೆಮಿಫೈನಲ್ಸ್‍ನಲ್ಲಿ ಮಡಿಕೇರಿ ತಾಲೂಕು ತಂಡವನ್ನು ಮಣಿಸಿ ಸೋಮವಾರಪೇಟೆ ತಾಲೂಕು ತಂಡ ಫೈನಲ್ ಪ್ರವೇಶಿಸಿತು. ಮುಂದಿನ ತಿಂಗಳು ಹಾಸನದಲ್ಲಿ ಜರುಗಲಿರುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲಾ ತಂಡ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದೆ.

ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲಾ ತಂಡದಲ್ಲಿ ಸಿ.ಎಂ.ಗೌರವ್ ನಾಯಕನಾಗಿದ್ದು, ಎಂ.ಎಂ.ಹಿತೇಶ್ ಪೊನ್ನಣ್ಣ ಗೋಲ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ. ಉಳಿದಂತೆ ವಿದ್ಯಾರ್ಥಿಗಳಾದ ಸಿ.ಪಿ.ಕುಶಾಲಪ್ಪ, ಎ.ಎನ್ ಹೃತೀಕ್, ಸಿ.ಸಿ. ಸೋಮಣ್ಣ, ಬಿ.ಆರ್. ಬಿಪಿನ್, ಸಿ.ಪಿ ನಿಕಿಲ್, ಬಿ.ಯು. ಮೋಕ್ಷಿತ್ ಸಾಲಿಯಾನ್, ಸಿ.ಎಂ. ಮೋಹಿತ್ ಮೊಣ್ಣಪ್ಪ, ಎ.ಎಂ. ಧನುಷ್, ಕೆ.ವಿ.ವರುಣ್, ಎನ್.ಡಿ. ತಿಮ್ಮಯ್ಯ, ಶ್ರೀನಿಧಿ, ಉಮೇಶ್, ಎನ್.ಆರ್. ಗೌತಮ್, ಎಂ.ಡಿ ಮಾಚಯ್ಯ, ದಿವಿಲ್ ಮಾಚಯ್ಯ ಮತ್ತು ಬಿದ್ದಪ್ಪ ತಂಡದಲ್ಲಿದ್ದರು. ಜೊತೆಗೆ ಹಾಕಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಗೋಣಿಕೊಪ್ಪಲಿನ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ನಿಹಾನ್ ಮತ್ತು ಶಾನ್ ಈ ವಿದ್ಯಾರ್ಥಿ ಗಳೊಂದಿಗೆ ತಾಲೂಕು ತಂಡವನ್ನು ಪ್ರತಿನಿಧಿಸಿದ್ದು, ಮುಂದೆಯೂ ವಿಭಾಗೀಯ ಮಟ್ಟದಲ್ಲಿ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಲು ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ತಂಡದ ತರಬೇತುದಾರ ಅರುಣ್ ಅಮ್ಮತ್ತಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಬಿ.ಎಸ್. ಟೀನಾ ಅವರು ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಆಗಿರುವ ಶಾಲೆಯ ಬಾಲಕರ ಹಾಕಿ ತಂಡ ವಿಭಾಗ ಮಟ್ಟದಲ್ಲಿ ಕೊಡಗನ್ನು ಪ್ರತಿನಿಧಿಸುತ್ತಿರುವದು ಶಾಲೆಗೆ ಕೀರ್ತಿ ತಂದಿದೆ. ವಿಭಾಗ ಮಟ್ಟದಲ್ಲೂ ಚಾಂಪಿಯನ್ ಆಗುವ ಭರವಸೆ ಇದ್ದು, ಕಳೆದ ಬಾರಿಯಂತೆ ರಾಷ್ಟ್ರ ಮಟ್ಟದಲ್ಲಿ ಶಾಲಾ ತಂಡ ಗಮನ ಸೆಳೆಯುವ ವಿಶ್ವಾಸವಿದೆ ಎಂದು ಹೇಳಿದರು.